ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ 10 ತಿಂಗಳ ಅವಧಿಯಲ್ಲಿ ಪೊಲೀಸ್ ಇಲಾಖೆಯ ಗನ್ಗಳು ಭಾರಿ ಸೌಂಡ್ ಮಾಡಿವೆ. ಕಾನೂನಿನ ವಿರುದ್ಧವಾಗಿ ಹೋದರೆ ಏನಾಗುತ್ತದೆ ಎಂಬುದನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಸರಿಯಾಗಿ ತೋರಿಸಿಕೊಟ್ಟಿದೆ. ರೌಡಿಗಳ ಕಾಳಗ, ಹಣಕ್ಕಾಗಿ ಪೀಡಿಸುವ ಖದೀಮರು, ಕೋಮು ಭಾವನೆಗೆ ಧಕ್ಕೆ ತರುವಂತಹ ಹಲವು ಹತ್ತು ಹಲವು ಘಟನೆಗಳಿಂದ ಶಿವಮೊಗ್ಗ ಅತೀ ಸೂಕ್ಷ್ಮ ಪ್ರದೇಶವಾಗಿದೆ. ಈ ಹಿನ್ನೆಲೆ ಜಿಲ್ಲಾ ಪೊಲೀಸರು ಕ್ರಿಮಿನಲ್ಗಳ ವಿರುದ್ಧ ತಮ್ಮ ಗನ್ಗೆ ಕೆಲಸ ಕೊಟ್ಟಿದ್ದಾರೆ.
ತುಂಗಾ ನಗರ ಪೊಲೀಸರಿಂದ ವರ್ಷದ ಪ್ರಥಮ ಫೈರಿಂಗ್: ಶಿವಮೊಗ್ದ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಗಿಂತಲೂ ತುಂಗಾ ನಗರ ಪೊಲೀಸ್ ಠಾಣೆ ಭೌಗೋಳಿಕವಾಗಿ ದೊಡ್ಡದಾಗಿದೆ. ಅಲ್ಲದೇ ಅತಿ ಹೆಚ್ಚು ಕ್ರಿಮಿನಲ್ಗಳು ಇದೇ ಠಾಣಾ ವ್ಯಾಪ್ತಿಯಲ್ಲಿದ್ದಾರೆ. ಈ ಹಿನ್ನೆಲೆ ತುಂಗಾ ನಗರ ಪೊಲೀಸ್ ಠಾಣೆಗೆ ಹೊಸದಾಗಿ ಬಂದಿದ್ದ ಪಿಐ ಮಂಜುನಾಥ್ ಅವರು ಹರ್ಷದ್ ಖಾನ್ ಎಂಬಾತನ ಕಾಲಿಗೆ ಗುಂಡು ಹಾರಿಸಿದ್ದರು. ಕ್ರಿಮಿನಲ್ ಹಾಗೂ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಈತನನ್ನು ಬಂಧಿಸಿದ್ದ ಪೊಲೀಸರು ಸ್ಥಳ ಮಹಜರು ಮಾಡಲು ಹೋದಾಗ ಸಿಬ್ಬಂದಿ ಮೇಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಆಗ ಪೊಲೀಸರು ಅನಿವಾರ್ಯವಾಗಿ ಫೈರಿಂಗ್ ಮಾಡಿದ್ದರು.
2ನೇ ಪ್ರಕರಣ: ದೊಡ್ಡಪೇಟೆ ಪೊಲೀಸ್ ಕಾನ್ಸ್‌ಸ್ಟೇಬಲ್ ಗುರುನಾಯ್ಕ ಮೇಲೆ ದಾಳಿ ಮಾಡಿರುವ ಆರೋಪಿ ಶಾಹಿದ್ ಖುರೇಷಿಯನ್ನು ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ. ಈ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಕೋಟೆ ಠಾಣೆಯ ಪಿಐ ಚಂದ್ರಶೇಖರ್ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದರು.
ಇದನ್ನೂ ಓದಿ: ಶಿವಮೊಗ್ಗ: ಪೊಲೀಸ್ ಸಿಬ್ಬಂದಿ ಎದೆಗೆ ಚಾಕು ಇರಿದ ಆರೋಪಿ ಕಾಲಿಗೆ ಗುಂಡೇಟು
3ನೇ ಪ್ರಕರಣ: ಆ.15 ರಂದು ಅಮೀರ್ ಅಹಮದ್ ವೃತ್ತದಲ್ಲಿ ವೀರ ಸಾವರ್ಕರ್ ಫ್ಲೆಕ್ಸ್ ತೆರವು ವಿಚಾರದಲ್ಲಿ ಉಂಟಾಗಿದ್ದ ಸಣ್ಣ ಗಲಾಟೆಯಲ್ಲಿ ಗಾಂಧಿ ಬಜಾರ್ನಲ್ಲಿ ಅಂಗಡಿ ಕ್ಲೋಸ್ ಮಾಡಿ ಮನೆಗೆ ತೆರಳುತ್ತಿದ್ದ ಪ್ರೇಮ್ ಸಿಂಗ್ ಎಂಬಾತನ ಮೇಲೆ ಚಾಕು ಇರಿತವಾಗಿತ್ತು. ಈ ಪ್ರಕರಣದಲ್ಲಿ ಜಬೀಯು ಎಂಬಾತ ಎ-1 ಆರೋಪಿಯಾಗಿದ್ದ. ಈತನನ್ನು ಬಂಧಿಸಲು ತೆರಳಿದಾಗ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ವಿನೋಬ ನಗರ ಪಿಎಸ್ಐ ಮಂಜುನಾಥ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಯುವಕನಿಗೆ ಚಾಕು ಇರಿತ.. ಪ್ರಮುಖ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
4ನೇ ಪ್ರಕರಣ: ಶಿವಮೊಗ್ಗದ ವೆಂಕಟೇಶ ನಗರದ ಎಎನ್ಕೆ ರಸ್ತೆಯಲ್ಲಿ ಅ.24ರಂದು ವಿಜಯ್ ಎಂಬಾತನ ಕೊಲೆ ನಡೆದಿತ್ತು. ಈ ಪ್ರಕರಣದಲ್ಲಿ ಜಬೀವುಲ್ಲಾ ಕಾರ್ತಿಕ್ ಹಾಗೂ ದರ್ಶನ್ ಆರೋಪಿಗಳಾಗಿರುತ್ತಾರೆ. ಮೂವರನ್ನು ಬಂಧಿಸಿದ ಪೊಲೀಸರು ಕೊಲೆ ನಡೆಸಿದ ಆಯುಧವನ್ನು ಬಿಸಾಡಿದ ಸ್ಥಳದಲ್ಲಿ ಮಹಜರು ನಡೆಸುವಾಗ ಜಬೀವುಲ್ಲಾ ಪೊಲೀಸ್ ಸಿಬ್ಬಂದಿಗೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿದ್ದ. ಈ ವೇಳೆ ಕುಂಸಿ ಪೊಲೀಸ್ ಠಾಣೆಯ ಪಿಐ ಹರೀಶ್ ಪಟೇಲ್, ಜಬಿ ಕಾಲಿಗೆ ಗುಂಡು ಹೊಡೆದಿದ್ದರು.
ಇದನ್ನೂ ಓದಿ: ಸ್ಥಳ ಮಹಜರು ವೇಳೆ ಹಲ್ಲೆ ನಡೆಸಿ ಪರಾರಿಗೆ ಯತ್ನ: ಶಿವಮೊಗ್ಗದಲ್ಲಿ ಆರೋಪಿ ಕಾಲಿಗೆ ಗುಂಡೇಟು
ಐದನೇ ಪ್ರಕರಣ: ಅ.30 ರಂದು ಬಿಹೆಚ್ ರಸ್ತೆಯಲ್ಲಿ ಅಶೋಕ್ ಪ್ರಭು ಎಂಬುವರ ಮುಖಕ್ಕೆ ಚೂಪಾದ ಆಯುಧದಿಂದ ಹಲ್ಲೆ ನಡೆಸಿ ನಾಲ್ವರ ಗುಂಪು ಪರಾರಿಯಾಗಿತ್ತು. ಈ ಪ್ರಕರಣದ ಆರೋಪಿ ಅಸ್ಲಾಂ ಎಂಬಾತ ಶಿವಮೊಗ್ಗ ಹೊರ ವಲಯದ ಹೊಳೆಹೊನ್ನೂರು ರಸ್ತೆಯ ರಾಶಿ ಡೆವಲಪರ್ಸ್ನಲ್ಲಿ ಅಡಗಿ ಕುಳಿತಿದ್ದ. ಖಚಿತ ಮಾಹಿತಿ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣೆಯ ಪಿಎಸ್ಐ ವಸಂತ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ ಬಂಧನಕ್ಕೆ ಮುಂದಾಗಿತ್ತು. ಈ ವೇಳೆ ಪೊಲೀಸ್ ಸಿಬ್ಬಂದಿ ರಮೇಶ್ ಎಂಬುವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ವಸಂತ ಕುಮಾರ್ ಅಸ್ಲಾಂ ಕಾಲಿಗೆ ಗುಂಡು ಹಾರಿಸಿದ್ದರು.
ಒಟ್ಟಿನಲ್ಲಿ ಜಿಲ್ಲಾ ಕೇಂದ್ರದಲ್ಲಿ ಕ್ರಿಮಿನಲ್ಗಳ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಜಿಲ್ಲಾ ಪೊಲೀಸರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಮತ್ತೊಮ್ಮೆ ಗುಂಡಿನ ಸದ್ದು: ಆರೋಪಿ ಕಾಲಿಗೆ ಗುಂಡೇಟು