ಶಿವಮೊಗ್ಗ: ಅಲ್ಪಸಂಖ್ಯಾತರ ಜನಸಂಖ್ಯೆಗೆ ಅನುಗುಣವಾಗಿ ಪ್ರಧಾನಮಂತ್ರಿ ಅವರ ಹೊಸ 15 ಅಂಶಗಳ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಸೂಚಿಸಿದ್ದಾರೆ.
ಪ್ರಧಾನಮಂತ್ರಿ 15 ಅಂಶಗಳ ಕಾರ್ಯಕ್ರಮಗಳ ಅನುಷ್ಠಾನ, ಪ್ರಗತಿ ಪರಿಶೀಲನೆ ಹಾಗೂ ಫೆಬ್ರುವರಿ 5 ರಂದು ಜಿಲ್ಲೆಗೆ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷ ಕುರಿಯನ್ ಭೇಟಿ ನೀಡುತ್ತಿರುವ ಹಿನ್ನೆಲೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ವಿಶೇಷ ಸಭೆ ನಡೆಯಿತು.
ಎಲ್ಲಾ ಇಲಾಖೆಗಳು ಸರ್ಕಾರದ ಆದೇಶದ ಪ್ರಕಾರ ತಮ್ಮ ಒಟ್ಟು ಬಜೆಟ್‍ನಲ್ಲಿ ಶೇ.15ರಷ್ಟು ಅನುದಾನವನ್ನು ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿರಿಸಬೇಕು. ತಮ್ಮ ಯೋಜನೆಗಳ ಕ್ರಿಯಾ ಯೋಜನೆಯಲ್ಲಿ ಕನಿಷ್ಠ ಶೇ.15ರಷ್ಟು ಅಲ್ಪಸಂಖ್ಯಾತ ಸಮುದಾಯದ ಫಲಾನುಭವಿಗಳಿಗೆ ತಲುಪುವಂತೆ ಖಾತ್ರಿಪಡಿಸಿಕೊಳ್ಳಬೇಕು. ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಉಪಾಧ್ಯಕ್ಷರ ಭೇಟಿ ಹಿನ್ನೆಲೆ ಎಲ್ಲಾ ಇಲಾಖೆಗಳು ಯೋಜನೆ ಅನುಷ್ಠಾನದ ಮಾಹಿತಿಯನ್ನು ಸೋಮವಾರದ ಒಳಗಾಗಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ತಾಕೀತು ಮಾಡಿದರು.
ಈ ವೇಳೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಧರ್ಮಪ್ಪ ಮಾತನಾಡಿ, ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಶೇ.13.55 ರಷ್ಟು ಅಲ್ಪಸಂಖ್ಯಾತರಿದ್ದಾರೆ. ಇವರಲ್ಲಿ ಶೇ.11.46 ಮುಸ್ಲಿಮರು, ಶೇ.1.5ರಷ್ಟು ಕ್ರಿಶ್ಚಿಯನ್ನರು, ಶೇ.0.54 ಜೈನರು, ಶೇ. 0.02 ಸಿಖ್ರು, ಶೇ. 0.009 ಬೌದ್ಧರಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯಕ್ರಮಗಳು, ಶಿಕ್ಷಣದ ಮಟ್ಟ ಉನ್ನತೀಕರಣ, ಉರ್ದು ಶಾಲೆಗಳಿಗೆ ಸಂಪನ್ಮೂಲ ಒದಗಿಸುವಿಕೆ, ಮದರಸಾಗಳ ಆಧುನೀಕರಣ, ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್, ಮೌಲಾನಾ ಆಜಾದ್ ಫೌಂಡೇಶನ್ ಮೂಲಕ ಶಿಕ್ಷಣ ಸಂಸ್ಥೆಗಳಿಗೆ ಮೂಲಸೌಕರ್ಯ ಕಲ್ಪಿಸುವಿಕೆ, ಸ್ವಯಂ ಉದ್ಯೋಗ ಸೃಷ್ಟಿ, ಕೌಶಲ ತರಬೇತಿ, ಆರ್ಥಿಕ ಚಟುವಟಿಕೆಗಳಿಗೆ ಸಾಲ ಸೌಲಭ್ಯ, ನೇಮಕಾತಿಗಳು, ವಸತಿ ಯೋಜನೆಗಳು, ಕೊಳಗೇರಿ ಅಭಿವೃದ್ಧಿಪಡಿಸುವಿಕೆ ಮುಂತಾದ ಯೋಜನೆಗಳನ್ನು ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮಗಳ ಅಡಿಯಲ್ಲಿ ಅನುಷ್ಠಾನಗೊಳಿಸಬೇಕಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಅನುರಾಧ, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಡಾ.ಹೆಚ್.ಟಿ. ಶೇಖರ್, ಯೋಜನಾ ನಿರ್ದೇಶಕ ಡಾ.ನಾಗೇಂದ್ರ ಹೊನ್ನಳ್ಳಿ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.