ಶಿವಮೊಗ್ಗ: ಅತಿಥಿ ಉಪನ್ಯಾಸಕರಿಗೆ ಲಾಕ್‌ಡೌನ್ ಅವಧಿಯ ವೇತನ ಮತ್ತು ಸೇವಾ ಭದ್ರತೆ ನೀಡುವ ಸಂಬಂಧ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.
ಲಾಕ್‌ಡೌನ್‌ನಿಂದಾಗಿ ವೇತನ ಮತ್ತು ಉದ್ಯೋಗ ಎರಡು ಇಲ್ಲದ ಕಾರಣದಿಂದ ಅತಿಥಿ ಉಪನ್ಯಾಸಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೋವಿಡ್-19 ರ ಮಾರ್ಗಸೂಚಿಯಂತೆ ಜುಲೈ 31ರವರೆಗೆ ವೇತನ ನೀಡಬೇಕು,
ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಕಳೆದ 6 ವಾರಗಳಿಂದ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಮಾಡುವ ಮೂಲಕ ಮುಖ್ಯಮಂತ್ರಿಗಳು ಮತ್ತು ಉನ್ನತ ಶಿಕ್ಷಣ ಸಚಿವರು ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿಕೊಂಡಿದ್ದರೂ ನ್ಯಾಯ ಸಿಗಲಿಲ್ಲ.
ಆದ್ದರಿಂದ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಾದರೂ ಅತಿಥಿ ಉಪನ್ಯಾಸಕರ ರಕ್ಷಣೆಗೆ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಮುಂದಾಗಬೇಕೆಂದು ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಡಾ.ಹೆಚ್.ಸೋಮಶೇಖರ್ ಶಿಮೊಗ್ಗಿ, ಡಾ.ಎಂ.ಸಿ.ನರಹರಿ, ಕೆ.ರಾಜೇಶ್ ಕುಮಾರ್ ಭಾಗವಹಿಸಿದ್ದರು.