ಶಿವಮೊಗ್ಗ: ನಮಗೆ ಕೆಲಸ ನೀಡಿ, ಇಲ್ಲವೇ ನಾವು ಓದಿದ ಕೋರ್ಸ್ ರದ್ದು ಮಾಡಿ ಎಂದು ಆಪರೇಷನ್ ಥಿಯೇಟರ್ ಟೆಕ್ನಾಲಜಿ ಕೋರ್ಸ್ ಮುಗಿಸಿದವರು ಪಟ್ಟು ಹಿಡಿದಿದ್ದಾರೆ.
ಈ ಕೋರ್ಸ್ ಮುಗಿಸಿದ ಶೇ 10 ರಷ್ಟು ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಸ್ತ್ರಚಿಕಿತ್ಸಾ ಕೂಠಡಿ ತಂತ್ರಜ್ಞರಾದ ಇವರ ಕೋರ್ಸ್ ಅನ್ನು 1997 ರಲ್ಲಿ ರಾಜ್ಯ ಸರ್ಕಾರ ಈ ಕೋರ್ಸ್ ಪ್ರಾರಂಭಿಸಿತು. ಆದರೆ 1997ರಿಂದ ಇದುವರೆಗೂ ಒಂದೇ ಒಂದು ಹುದ್ದೆಗೆ ಸರ್ಕಾರ ಕರೆದಿಲ್ಲ. ಈ ಕೋರ್ಸ್ ಮುಗಿಸಿದವರು ರಾಜ್ಯಾದ್ಯಂತ 6 ಸಾವಿರಕ್ಕೂ ಅಧಿಕ ಮಂದಿ ಇದ್ದಾರೆ. ಈ ಕೋರ್ಸ್ ಮುಗಿಸಿದವರು ಆಪರೇಷನ್ ಥಿಯೇಟರ್ ತಯಾರು ಮಾಡುವುದು. ಓರ್ವ ರೋಗಿಗೆ ಆಪರೇಷನ್ ಮಾಡಲು ಬೇಕಾದ ಎಲ್ಲಾ ವಸ್ತುಗಳನ್ನು ಸಿದ್ಧ ಪಡಿಸುತ್ತಾರೆ. ಆದರೆ ಕೋರ್ಸ್ ಶುರುವಾಗಿ ಇಷ್ಟು ವರ್ಷಗಳಾದರೂ ರಾಜ್ಯ ಸರ್ಕಾರ ಈ ಬಗ್ಗೆ ಉದ್ಯೋಗ ಸೃಷ್ಟಿ ಮಾಡಲು ಮುಂದಾಗದಿರುವುದು ಆಪರೇಷನ್ ಥಿಯೇಟರ್ ಟೆಕ್ನಾಲಜಿ ಕೋರ್ಸ್ ಮುಗಿಸಿದವರ ಆಕ್ರೋಶಕ್ಕೆ ಕಾರಣವಾಗಿದೆ.
ನಾವು ಸರ್ಕಾರ ತೆರೆದ ಕೋರ್ಸ್ ಎಂದು ಬಂದು ಓದಿ ಈಗ ಉದ್ಯೋಗವಿಲ್ಲದೆ ಬೇರೆ ಉದ್ಯೋಗಕ್ಕೆ ಹೋಗಲು ಆಗದೆ ಪರದಾಡುತ್ತಿದ್ದೇವೆ. ಆರೋಗ್ಯ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆಯಲ್ಲಿ ಹುದ್ದೆ ಭರ್ತಿ ಮಾಡಿಕೊಳ್ಳಲು ಅನೇಕ ಬಾರಿ ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಕರ್ನಾಟಕ ರಾಜ್ಯ ಆಪರೇಷನ್ ಥಿಯೇಟರ್ ಟೆಕ್ನಾಲಜಿಸ್ಟ್ ಯೂನಿಯನ್ ಮುಖಂಡ ಪ್ರಭು ಹೇಳಿದ್ದಾರೆ.