ಶಿವಮೊಗ್ಗ: ನಗರದ ನೆಹರು ಮೈದಾನದಲ್ಲಿ ಮೋದಿ ವಿಚಾರ್ ಮಂಚ್ ವತಿಯಿಂದ ಆಯೋಜಿಸಿದ್ದ 'ಒಂದು ದೇಶ ಒಂದು ಚುನಾವಣೆ' ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ನಗಾರಿ ಬಾರಿಸುವ ಮೂಲಕ ಸಚಿವ ಕೆ.ಎಸ್ ಈಶ್ವರಪ್ಪ ಚಾಲನೆ ನೀಡಿದರು.
ಚಕ್ರವರ್ತಿ ಸೂಲಿಬೆಲೆ ಅವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಭಾಗಿಯಾಗಿ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಚುನಾವಣೆಯಿಂದಾಗಿ ದೇಶದ ಆರ್ಥಿಕತೆ ಹಾಳಾಗುವುದರ ಜೊತೆಗೆ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತವೆ. ಹಾಗಾಗಿ ಒಂದು ದೇಶ ಒಂದು ಚುನಾವಣೆ ಅವಶ್ಯಕವಾಗಿದೆ. ಆದರೆ ವಿರೋಧ ಪಕ್ಷದವರು ಯಾಕೆ ಇಂತಹ ಕಾಯ್ದೆಗಳನ್ನು ವಿರೋಧ ಮಾಡುತ್ತಾರೆ ಗೊತ್ತಿಲ್ಲಾ ಎಂದರು.
ಒಂದು ದೇಶ ಒಂದು ಚುನಾವಣೆಯಿಂದ ಸ್ಥಿರ ಸರ್ಕಾರ ಆಡಳಿತಕ್ಕೆ ಬರುತ್ತದೆ. ಹಾಗೂ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ. ಪ್ರಧಾನಿ ಈ ಯೋಜನೆ ಭಾರತೀಯ ಜನತಾ ಪಕ್ಷಕ್ಕೆ ಒಳ್ಳೆಯದಾಗ್ಲಿ ಎಂದು ಮಾಡುತ್ತಿಲ್ಲ. ಬದಲಾಗಿ ದೇಶಕ್ಕೆ ಒಳ್ಳೆಯದಾಗಲಿ. ದೇಶ ಅಭಿವೃದ್ಧಿ ಆಗಲಿ ಎಂಬ ಉದ್ದೇಶದಿಂದ ಜಾರಿಗೆ ತರಲು ಹೊರಟಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ಚುನಾವಣೆಯಿಂದಾಗಿ ಕೋಟ್ಯಾಂತರ ರೂಪಾಯಿ ವೆಚ್ಚ ಆಗುತ್ತಿದೆ. ಹಾಗಾಗಿ ಒಂದು ದೇಶ ಒಂದು ಚುನಾವಣೆ ನಮ್ಮ ದೇಶಕ್ಕೆ ಅವಶ್ಯಕ ಇದೆ ಎಂದರು. ಪಾಲಿಸಿ ಪ್ಯಾರಲಿಸಿಸ್ನಿಂದ ಭಾರತವನ್ನು ರಕ್ಷಿಸಬೇಕಾದರೆ ಒಂದು ದೇಶ ಒಂದು ಚುನಾವಣೆ ನಡೆಸುವುದು ಒಂದೇ ಮಾರ್ಗ.ಒಂದು ದೇಶ ಒಂದು ಚುನಾವಣೆ ನಮ್ಮ ದೇಶಕ್ಕೆ ಹೊಸದೇನು ಅಲ್ಲ. ಸ್ವತಂತ್ರ ಬಂದ ನಂತರದಲ್ಲಿ ಒಂದು ದೇಶ ಒಂದು ಚುನಾವಣೆ ನಡೆಯುತ್ತಿತ್ತು. ಆದರೆ ನಂತರದಲ್ಲಿ ಬದಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸಭಾಪತಿ ಡಿ.ಎಚ್ ಶಂಕರ್ ಮೂರ್ತಿ ,ಮೋದಿ ವಿಚಾರ್ ಮಂಚ್ನ ರಾಜ್ಯಾಧ್ಯಕ್ಷ ಸಂತೋಷ ಬಳ್ಳಕೆರೆ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.