ಶಿವಮೊಗ್ಗ: ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದ ಅಡಿಯಲ್ಲಿ ಕುಷ್ಠರೋಗ ಪತ್ತೆ ಹಾಗೂ ನಿರ್ಮೂಲನ ಜಾಥಾವನ್ನು ಆರೋಗ್ಯ ಇಲಾಖೆ ವತಿಯಿಂದ ನಗರದಲ್ಲಿ ಇಂದು ನಡೆಸಲಾಯಿತು.
ತುಂಗಾ ನಗರ ಆರೋಗ್ಯ ಕೇಂದ್ರದಲ್ಲಿ ಕಾರ್ಯಕ್ರಮಕ್ಕೆ ವೈದ್ಯಾಧಿಕಾರಿ ಡಾ. ಸಿದ್ದಪ್ಪ ಚಾಲನೆ ನೀಡಿದರು. ಬಳಿಕ ನಗರದಲ್ಲಿ ಸಂಚಾರ ಮಾಡಿ ಕುಷ್ಠರೋಗ, ಅದರ ಲಕ್ಷಣಗಳೇನು ಹಾಗೂ ಅದಕ್ಕೆ ಇರುವ ಚಿಕಿತ್ಸೆ ಕುರಿತು ಜಾಥಾದಲ್ಲಿ ತಿಳಿಸಲಾಯಿತು. ಜಾಥದಲ್ಲಿ ವಿವಿಧ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಜೊತೆ ಸೇರಿ ಮನೆ ಮನೆಗೆ ತೆರಳಿ ಕುಷ್ಠರೋಗದ ಬಗ್ಗೆ ಅರಿವು ಮೂಡಿಸಿದರು. ಮನೆಗಳಲ್ಲಿ ವಾಸ ಮಾಡುವವರ ಮೈ ಮೇಲೆ ಇರುವ ಬಿಳಿ ಕಲೆಗಳನ್ನು ಪತ್ತೆ ಮಾಡುವುದು. ಅದು ಕುಷ್ಠರೋಗದ ಲಕ್ಷಣವೇ ಎಂದು ಗುರುತಿಸಿ, ಅದಕ್ಕೆ ಚಿಕಿತ್ಸೆಯನ್ನು ಹೇಗೆ ಪಡೆಯುವುದು ಎಂಬುದನ್ನು ತಿಳಿಸಿಕೊಡಲಾಯಿತು.
ಕುಷ್ಠರೋಗವನ್ನು ದೇಶದಿಂದಲೇ ನಿರ್ಮೂಲನೆ ಮಾಡಲು ಪಲ್ಸ್ ಪೊಲಿಯೋ ಮಾದರಿಯಲ್ಲಿ ಆಂದೋಲನ ನಡೆದಲಾಗುತ್ತಿದೆ. ಇದಕ್ಕಾಗಿ ಇಂದಿನಿಂದ ಡಿಸಂಬರ್ 12ರ ತನಕ ಪ್ರತಿ ಜಿಲ್ಲೆ, ನಗರ, ಗ್ರಾಮದಲ್ಲಿ ಆಂದೋಲನ ನಡೆಸಲಾಗುತ್ತಿದೆ. ಕುಷ್ಠರೋಗಕ್ಕೆ ಎಲ್ಲಾ ಸರ್ಕಾರಿ ಆಸ್ಪತ್ರಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ವೈದ್ಯ ಡಾ. ಸಿದ್ದಪ್ಪ ತಿಳಿಸಿದರು.