ಶಿವಮೊಗ್ಗ: ನಿನ್ನೆ ತೋಟಕ್ಕೆ ಹೋಗಿದ್ದ ವ್ಯಕ್ತಿಯೊಬ್ಬ ಇಂದು ತನ್ನದೇ ತೋಟದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಶಿವಮೊಗ್ಗ ತಾಲೂಕು ಹೊಳಲೂರು ಗ್ರಾಮದಲ್ಲಿ ನಡೆದಿದೆ.
ಮಲ್ಲೇಶ್ (37) ಕೊಲೆಯಾದ ವ್ಯಕ್ತಿ. ಈತ ನಿನ್ನೆ ಬೆಳಗ್ಗೆ ಹೊಸಕೆರೆಯ ತನ್ನ ತೋಟಕ್ಕೆ ಹೋಗಿದ್ದಾರೆ. ಆದರೆ, ರಾತ್ರಿಯಾದರೂ ಮನೆಗೆ ಬಾರದೇ ಇರುವುದರಿಂದ ಬೆಳಗ್ಗೆ ತೋಟಕ್ಕೆ ಹೋಗಿ ನೋಡಿದಾಗ ಮಲ್ಲೇಶನನ್ನು ಯಾರೋ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವುದು ಕಂಡು ಬಂದಿದೆ.
ಕೊಲೆಗೆ ಕಾರಣ ತಿಳಿದು ಬಂದಿಲ್ಲ. ತಕ್ಷಣ ಪೊಲೀಸರಿಗೆ ವಿಷಯ ತಿಳಿಸಲಾಗಿದೆ. ಸ್ಥಳಕ್ಕೆ ಎಎಸ್ಪಿ ಡಾ.ಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.