ಶಿವಮೊಗ್ಗ: ಸೊರಬ ತಾಲೂಕಿನ ಬಿ. ಹುಣಸನಹಳ್ಳಿ ಗ್ರಾಮದ ರವೀಂದ್ರ ಎನ್ನುವಾತ ಮಂಜುಳ ಬಾಯಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಸದ್ಯ ಆಕೆಯೇ ಇನ್ನೋರ್ವನ ಜೊತೆಗೂಡಿ ರವೀಂದ್ರನನ್ನು ಕೊಲೆ ಮಾಡಿರುವ ಆರೋಪದಡಿ ಇಬ್ಬರು ಆರೋಪಿಗಳು ಪೊಲೀಸರ ಅತಿಥಿಯಾಗಿದ್ದಾರೆ.
ಸೆಪ್ಟಂಬರ್ 29 ರಂದು ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕುಸ್ಮೂರು ಗ್ರಾಮದ ಕೆರೆಯಲ್ಲಿ ವ್ಯಕ್ತಿಯೋರ್ವನ ಶವ ಪತ್ತೆಯಾಗಿತ್ತು. ಈ ಶವ ಸೊರಬ ತಾಲೂಕು ಬಿ. ಹುಣಸನಹಳ್ಳಿ ಗ್ರಾಮದ ರವೀಂದ್ರ (36) ಅವರದ್ದು ಎಂದು ಆತನ ಪತ್ನಿ ಗುರುತಿಸಿದ್ದಾರೆ.
ಮೃತ ರವೀಂದ್ರ ಶಿಕಾರಿಪುರದ ಬಿದರಕೊಪ್ಪದ ಮಂಜುಳ ಬಾಯಿ ಎಂಬಾಕೆಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಆದ್ರೆ ಮಂಜುಳ ಬಾಯಿ ತುಕ್ಕರಾಜು ಎಂಬಾತನ ಜೊತೆ ಸಂಬಂಧ ಹೊಂದಿದ್ದಳು. ಇದರಿಂದ ರವೀಂದ್ರ ಮಂಜುಳಬಾಯಿ ಜೊತೆಗೆ ಜಗಳವಾಡಿ ಆಕೆಯಿಂದ ದೂರವಾಗಿದ್ದ. ಅಲ್ಲದೇ ತುಕ್ಕರಾಜು ಜೊತೆ ಸಂಬಂಧ ಬಿಡುವಂತೆ ತಿಳಿಸಿದ್ದ.
ಇದರಿಂದ ಕೋಪಗೊಂಡ ಮಂಜುಳಬಾಯಿ ಹಾಗೂ ತುಕ್ಕರಾಜು ಸೇರಿ ರವೀಂದ್ರನನ್ನು ಚಾಕುವಿನಿಂದ ಕೊಂದು ನಂತರ ಶವವನ್ನು ತನ್ನ ದ್ವಿಚಕ್ರ ವಾಹನದಲ್ಲಿ ತೆಗೆದುಕೊಂಡು ಹೋಗಿ ಕೆರೆಗೆ ಎಸೆದು ಹೋಗಿದ್ದಾರೆಂದು ತಿಳಿದುಬಂದಿದೆ. ಈ ಕುರಿತು ತನಿಖೆ ನಡೆಸಿದ ಶಿರಾಳಕೊಪ್ಪ ಪೊಲೀಸರು ಮಂಜುಳ ಬಾಯಿ ಹಾಗೂ ತುಕ್ಕರಾಜುನನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.