ಶಿವಮೊಗ್ಗ : ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುತ್ತಿದ್ದಂತೆ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಅಭಿವೃದ್ಧಿಯ ಮಹಾಪರ್ವವೇ ಆರಂಭವಾಗಿದೆ. ಈಗಾಗಲೇ ವಿಮಾನ ನಿಲ್ದಾಣ ಕಾಮಗಾರಿ ಭರದಿಂದ ಸಾಗಿದೆ. ಇದೀಗ ಸಿಎಂ ಪುತ್ರ, ಸಂಸದ ಬಿ.ವೈ.ರಾಘವೇಂದ್ರ ಅವರ ಶ್ರಮದಿಂದಾಗಿ ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಹತ್ತಾರು ಕೋಟಿ ರೂ. ಅನುದಾನ ಹರಿದು ಬಂದಿದೆ.
ಜಿಲ್ಲೆಯಲ್ಲಿ ಈವರೆಗೆ ಹೆದ್ದಾರಿಗಳು ಅಭಿವೃದ್ಧಿಗೊಂಡಿರಲಿಲ್ಲ. ಹೀಗಾಗಿ, ಹೆದ್ದಾರಿ ಹಾದು ಹೋಗುವ ನಗರ ಹಾಗೂ ಪಟ್ಟಣಗಳಲ್ಲಿ ಟ್ರಾಫಿಕ್ ಜಾಮ್ ಮಾಮೂಲಿ ಎನ್ನುವಂತಾಗಿತ್ತು.
ಇದರಿಂದಾಗಿ ಜನ ಕಿರಿಕಿರಿ ಅನುಭವಿಸುವಂತಾಗಿತ್ತು. ಇದನ್ನು ಮನಗಂಡಿರುವ ಸಂಸದ ಬಿ.ವೈ.ರಾಘವೇಂದ್ರ ಹೆದ್ದಾರಿಗಳ ಅಗಲೀಕರಣಕ್ಕೆ ಕ್ರಮ ಕೈಗೊಂಡಿದ್ದಾರೆ. ಹೆದ್ದಾರಿ ಅಗಲೀಕರಣ ಕಾಮಗಾರಿಗಳಿಗೆ ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮಂಜೂರಾತಿಯೂ ಸಿಕ್ಕಿದೆ.
ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಸಂಪರ್ಕ ಕಲ್ಪಿಸುವ ಎನ್‌ಟಿರಸ್ತೆಯಲ್ಲಿ ಹೆಚ್ಚಿನ ವಾಹನ ದಟ್ಟಣೆಯಿಂದಾಗಿ ನಗರದಲ್ಲಿ ಪ್ರತಿ ದಿನ ಟ್ರಾಫಿಕ್ ಜಾಮ್ ಮಾಮೂಲಿ ಎನ್ನುವಂತಾಗಿತ್ತು. ಇದೀಗ ಈ ರಸ್ತೆಯನ್ನು 54.58 ಕೋಟಿ ರೂ.ವೆಚ್ಚದಲ್ಲಿ ಚತುಷ್ಪದ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಲಾಗುತ್ತಿದೆ.
ಜೊತೆಗೆ ಬೆಂಗಳೂರು ಹೊನ್ನಾವರ ಹೆದ್ದಾರಿ ಮಧ್ಯದ ತುಂಗಾ ನದಿ ಸೇತುವೆ ಮೇಲೆ ಆಗುತ್ತಿರುವ ಟ್ರಾಫಿಕ್ ಜಾಮ್ ತಪ್ಪಿಸುವ ಉದ್ದೇಶದಿಂದ ರಿಂಗ್ ರಸ್ತೆಯಲ್ಲಿ 20.12 ಕೋಟಿ ರೂ. ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಮಂಜುರಾತಿ ದೊರೆತಿದೆ.
ಅಲ್ಲದೇ ಬೈಂದೂರು, ರಾಣೆಬೆನ್ನೂರು ಹೆದ್ದಾರಿ ಸಂಖ್ಯೆ 310ನ್ನು 77.19 ಕೋಟಿ ರೂ. ವೆಚ್ಚದಲ್ಲಿ, ಶಿವಮೊಗ್ಗ ಚಿತ್ರದುರ್ಗ ಹೆದ್ದಾರಿಯನ್ನು 514 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ ಹೆದ್ದಾರಿ ಅಭಿವೃದ್ಧಿ, ಹೊರವರ್ತುಲ ರಸ್ತೆಯ ಕಾಮಗಾರಿಗಳು ಆರಂಭಗೊಂಡಿದ್ದರಿಂದ ಮಲೆನಾಡಿನ ಜನ ನಿಟ್ಟುಸಿರು ಬಿಟ್ಟಿದ್ದಾರೆ.
ಓದಿ: ಜಿಲ್ಲೆಯಲ್ಲಿ ಎಸ್ಎಜಿ ಯೋಜನೆಯಡಿ ಮೂಲ ಸೌಕರ್ಯ ಅಭಿವೃದ್ಧಿ: ಸಂಸದ ಬಿ.ವೈ.ರಾಘವೇಂದ್ರ