ಶಿವಮೊಗ್ಗ : ವಿಧಾನಸೌಧ ಪ್ರವೇಶ ಮಾಡುವುದಕ್ಕೂ ಮುನ್ನ ಕಾಂಗ್ರೆಸ್‌ನವರು ಗೋಮೂತ್ರ ಸಿಂಪಡಣೆ ಮಾಡಿದ್ದರು. ಇದೀಗ ಗೋ ಹತ್ಯೆಯ ವಿಚಾರ ಮಾತನಾಡುತ್ತಿದ್ದಾರೆ ಎಂದು ಶಿವಮೊಗ್ಗ ನಗರದ ಬಿಜೆಪಿ ಶಾಸಕ ಚನ್ನಬಸಪ್ಪ ಚೀಕಿಸಿದರು. ಶಿವಮೊಗ್ಗದಲ್ಲಿ ಇಂದು ಅವರು ಮಾತನಾಡಿದರು.
ಗೋವುಗಳಿಗೆ ವಯಸ್ಸಾಗಿದೆ ಎಂದು ಕಟುಕನಿಗೆ ಕೊಡುವುದಾದರೆ ನಾಳೆ 75 ವರ್ಷ ಆಗಿರುವ ಪುರುಷರು ಮತ್ತು ಮಹಿಳೆಯರು ಇರಬಾರದು ಅಂತಾ ಸಿದ್ದರಾಮಯ್ಯ ನಿರ್ಣಯ ಮಾಡುತ್ತಾರೆ. ಈಗ ಗೋವುಗಳಿಗೆ ಮಾಡಿದರೆ ಮುಂದೆ ಮನುಷ್ಯರಿಗೂ ಮಾಡುತ್ತಾರೆ. ಅಷ್ಟು ಕೆಟ್ಟ ರೀತಿಯಾಗಿ ಆಲೋಚನೆ ಮಾಡುವ ಮನಸ್ಸು ಕಾಂಗ್ರೆಸ್‌ನವರಿಗಿದ್ದು, ವಯಸ್ಸಾಗಿರುವ ತಂದೆ ತಾಯಿಗಳನ್ನು ತಗೊಂಡು ಹೋಗಿ ವೃದ್ದಾಶ್ರಮಕ್ಕೆ ಸೇರಿಸುತ್ತಾರಾ ಎಂದು ಎಂದು ಚನ್ನಬಸಪ್ಪ ಪ್ರಶ್ನಿಸಿದರು.
ಈ ಬಾರಿ ವಿಧಾನಸಭೆ ಅಧಿವೇಶನ ಆರಂಭಕ್ಕೂ ಮೊದಲು ಗೋಮೂತ್ರ ಸಿಂಪಡಿಸಿ ಒಳ ಹೋದವರಿಗೆ ಅದೇ ಗೋವಿನಿಂದ 12 ವರ್ಷದ ನಂತರ ಗೋಮೂತ್ರ ಸಿಗುವುದಿಲ್ಲವೇ?. ಒಂದು ಕಡೆ ಶ್ರದ್ದೆ ತೋರುತ್ತೀರಾ, ಮತ್ತೊಂದೆಡೆ ಕಟುಕರಿಗೆ ಗೋವು ಕಡಿಯುವುದಕ್ಕೆ ಕೊಡಲು ನಿರ್ಣಯ ಮಾಡುತ್ತೀರಿ. ನಿಮ್ಮ ದ್ವಂದ್ವ ನಿಲುವು ರಾಜ್ಯದ ಜನತೆಗೆ ಗೊತ್ತಾಗುತ್ತಿದೆ ಎಂದು ಕಿಡಿಕಾರಿದರು.
ಗೋಹತ್ಯೆ ನಿಷೇಧ ಮಾಡಬೇಕು ಎಂದು ಯೋಚಿಸಿ ಬಿಜೆಪಿ ಸರ್ಕಾರ ಒಂದು ಕಾನೂನು ತಂದಿದೆ. ನೀವು ಈ ಕಾನೂನು ರದ್ದು ಮಾಡುತ್ತೇವೆ ಅಂತೀರಾ. ರದ್ದು ಮಾಡಿದ ಬಳಿಕ ನಿಮ್ಮ ನೇತೃತ್ವದ ಸರ್ಕಾರ ಉಳಿದುಕೊಳ್ಳಲಿ ನೋಡೋಣ. 12 ವರ್ಷ ಆಗಿರುವ ಗೋವುಗಳನ್ನು ಕಟುಕರಿಗೆ ಕೊಡಬೇಕು ಎಂದು ಕಾಯ್ದೆಯಲ್ಲಿ ಎಲ್ಲಿಯೂ ಹೇಳಿಲ್ಲ. ಆ ಕಾಯ್ದೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಸ್ತೃತ ಅಧ್ಯಯನ ಮಾಡಬೇಕು. ಅಧಿಕಾರದ ಮದ ನೆತ್ತಿಗೇರಿಸಿಕೊಂಡು ಗೋವು ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ.
ಕಾಂಗ್ರೆಸ್ಗೆ ಹೇಳಿದಂತೆ ನಡೆದುಕೊಳ್ಳುವುದು ಗೊತ್ತಿಲ್ಲ. ಉಚಿತ ವಿದ್ಯುತ್ ಕೊಡುತ್ತೇವೆ ಎಂದರು. ಅದರ ಬೆಲೆ ಜಾಸ್ತಿ ಮಾಡುತ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಮಾಡಿದ್ದಾರೆ. ಜನ ಈ ಬಗ್ಗೆ ಚರ್ಚೆ ಮಾಡುತ್ತಾರೆ ಎಂದು ವಿದ್ಯುತ್ ದರ ಏರಿಕೆ ವಿಷಯ ಡೈವರ್ಟ್ ಮಾಡಲು ಗೋಹತ್ಯೆ ಬಗ್ಗೆ ಹೇಳಿಕೆ ಕೊಡುತ್ತಿದ್ದಾರೆ. ಇದು ಹೇಡಿಗಳ ಲಕ್ಷಣ ಎಂದು ಕಿಡಿ ಕಾರಿದರು.
ಬಡವರ ಪರವಾಗಿ ಬಿಜೆಪಿ ಸದನದ ಹೊರಗೆ, ಒಳಗೆ ಹೋರಾಟ ಮಾಡುತ್ತದೆ. ಕಾಂಗ್ರೆಸ್ಗೆ ಹೇಳಿದಂತೆ ನಡೆದುಕೊಳ್ಳುವುದು ಗೊತ್ತಿಲ್ಲ. ಹೀಗಾಗಿ ಕಾಂಗ್ರೆಸ್‌ನವರು ಏನೂ ಮಾಡದಂತಹ ಪರಿಸ್ಥಿತಿ ತಲುಪಿದ್ದಾರೆ. ಅವರು ಬಡವರ ಪರ ಯೋಚನೆ ಮಾಡಲೇ ಇಲ್ಲ. ಇಂದಿರಾ ಗಾಂಧಿ ಕಾಲದಿಂದ ಗರೀಬಿ ಹಠಾವೋ ಅಂದರು. ಗರೀಬಿ ಹಠಾವೋ ನಡೆಯಲೇ ಇಲ್ಲ. ಬಿಜೆಪಿ ಸರಕಾರದ ಅಭಿವೃದ್ಧಿ ಕಾಮಗಾರಿಗಳ ಹಣ ತಡೆ ಹಿಡಿದಿದ್ದಾರೆ. ನಿಮಗೆ ನಾಚಿಕೆ ಆಗಬೇಕು ಎಂದು ಶಾಸಕ ಚನ್ನಬಸಪ್ಪ ಕಾಂಗ್ರೆಸ್ ಸರ್ಕಾರದ ವಿರುದ್ದ ಗುಡುಗಿದರು.
ಇದನ್ನೂ ಓದಿ : ಸಚಿವ ವೆಂಕಟೇಶ್ ಹೇಳಿಕೆಗೆ ಖಂಡನೆ: ಗೋವುಗಳೊಂದಿಗೆ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ