ಶಿವಮೊಗ್ಗ : ಕರ್ನಾಟಕವನ್ನು ದೇಶದ ನಂಬರ್ ಒನ್ ಕೈಗಾರಿಕಾ ರಾಜ್ಯವನ್ನಾಗಿ ಮಾಡುವ ಗುರಿ ನಮ್ಮದಾಗಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ನಗರದ ದೇವಕಾತಿಕೊಪ್ಪದ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಮಾತನಾಡಿದ ಅವರು, ಸದ್ಯ ದೇವಕಾತಿಕೊಪ್ಪದ ಕೈಗಾರಿಕಾ ಪ್ರದೇಶದಲ್ಲಿ ಸಾಕಷ್ಟು ಮೂಲಸೌಕರ್ಯದ ಕೊರತೆ ಇದೆ. ಮುಖ್ಯವಾಗಿ ನೀರು, ವಿದ್ಯುತ್, ಸಾಲ ಸಿಗದೆ ಪರದಾಡುವಂತಾಗಿದೆ. ಈ ಬಗ್ಗೆ ಸಂಬಂಧಿಸಿದವರ ಜೊತೆ ಮಾತನಾಡಿ ಅದಷ್ಟು ಬೇಗ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು.
ಯಾವುದೇ ಒಂದು ಜಿಲ್ಲೆಗೆ ಬಂದಾಗ ಅಲ್ಲಿನ ಸಮಸ್ಯೆಗಳ ಕುರಿತು ಸ್ಥಳ ಪರಿಶೀಲನೆ ನಡೆಸಿದಾಗ ಸಮಸ್ಯೆಯ ಅರಿವಾಗುತ್ತದೆ. ಈ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದೇವೆ. ಸದ್ಯ ಕರ್ನಾಟಕ ದೇಶದ ಕೈಗಾರಿಕಾ ಕ್ಷೇತ್ರದಲ್ಲಿ 6ನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಕರ್ನಾಟಕವನ್ನು 1ನೇ ಸ್ಥಾನಕ್ಕೆ ತರುವ ಯೋಜನೆ ಇದೆ ಎಂದರು.
ಕೈಗಾರಿಕಾ ಅಭಿವೃದ್ಧಿಯ ವಿಚಾರದಲ್ಲಿ ನಮ್ಮ ಇಲಾಖೆಯಿಂದ ಏನೇ ಪ್ರಸ್ತಾಪ ಮಾಡಿದರೂ ಸಹ ಸಿಎಂ ಯಡಿಯೂರಪ್ಪನವರು ನಮಗೆ ಸೂಕ್ತವಾಗಿ ಸ್ಪಂದಿಸುತ್ತಿದ್ದಾರೆ. ರಾಜ್ಯ ಕೈಗಾರಿಕೆಯಲ್ಲಿ ನಂಬರ್ ಒನ್ ಆಗಬೇಕಾದ್ರೆ, ಶಿವಮೊಗ್ಗ ಜಿಲ್ಲೆಯ ಪಾತ್ರ ಅತಿ ಮುಖ್ಯವಾಗಿದೆ. ಶಿವಮೊಗ್ಗ ಜಿಲ್ಲೆ ಸಿಎಂ ಯಡಿಯೂರಪ್ಪನವರ ಜಿಲ್ಲೆಯಾಗಿದ್ದು, ಈ ದೃಷ್ಟಿಯನ್ನಿಟ್ಟುಕೊಂಡು ನಾವು ಕೈಗಾರಿಕೆಗಳ ಅಭಿವೃದ್ದಿ ಮಾಡುತ್ತೇವೆ ಎಂದರು.
ಈಗಾಗಲೇ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಇದು ಸಹ ಕೈಗಾರಿಕಾ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಸಂಸದ ಬಿ ವೈ ರಾಘವೇಂದ್ರ, ಶಾಸಕ ಅಶೋಕ ನಾಯ್ಕ, ಕೈಗಾರಿಕಾ ಕಾರ್ಯದರ್ಶಿ ಗೌರವ ಗುಪ್ತ ಹಾಜರಿದ್ದರು.