ಶಿವಮೊಗ್ಗ: ಮಲೆನಾಡಿನಲ್ಲಿ ಗಾಳಿ ಮಳೆಗೆ ಮರ ಬಿದ್ದು ವಿದ್ಯುತ್ ಹೋಗುವುದು ಸಾಮಾನ್ಯ, ಆದರೆ, ಅದನ್ನು ತಕ್ಷಣ ಸರಿಪಡಿಸಬೇಕಾದ ಅರಣ್ಯ ಹಾಗೂ ಮೆಸ್ಕಾಂ ಅಧಿಕಾರಿಗಳಿಗೆ ಸಚಿವ ಈಶ್ವರಪ್ಪ ಇಂದು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಅರಣ್ಯ ಹಾಗೂ ಮೆಸ್ಕಾಂ ಇಲಾಖೆಯರವರ ವಿಶೇಷ ಸಭೆಯನ್ನು ಸಚಿವರು ನಡೆಸಿದರು. ಈ ವೇಳೆ ಮಳೆ ಬಂದು ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಭಾಗದಲ್ಲಿ ವಿದ್ಯುತ್ ಇಲ್ಲದೆ ವಾರವೇ ಆಗಿದೆ. ಅಲ್ಲಿನ ಜನ ಕತ್ತಲಲ್ಲಿ ಬದುಕುವಂತಾಗಿದೆ. ನಮ್ಮ- ನಿಮ್ಮಂತೆಯೇ ಅವರು ಮನುಷ್ಯರು, ಅವರಿಗೆ ಕರೆಂಟ್ ನೀಡಬೇಕು ಎಂದು ನಿಮಗೆ ಅನ್ನಿಸಲಿಲ್ಲವೆ ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.
ವಿದ್ಯುತ್ ಕಂಬದ ಮೇಲೆ ಬೀಳುವ ಅಕೇಷಿಯ ಮರಗಳನ್ನು ತೆಗೆಯಲು ಅರಣ್ಯಾಧಿಕಾರಿಗಳು ಅನುಮತಿ ನೀಡುತ್ತಿಲ್ಲ ಎಂದು ಮೆಸ್ಕಾಂನ ತೀರ್ಥಹಳ್ಳಿ ಅಧಿಕಾರಿ ತಿಳಿಸಿದಾಗ ಅರಣ್ಯಾಧಿಕಾರಿ ಶಂಕರ್ ಅವರು ನಮ್ಮಲ್ಲಿ ಮರ ಕಟ್ ಮಾಡುವ ಯಂತ್ರ ಇಲ್ಲ ಎಂದು ಹೇಳಿದಾಗ ಸಚಿವರು ಪುಲ್ ಗರಂ ಆದರು.
ಮಿಷನ್ಗೆ ಎಷ್ಟು ಹಣ ಬೇಕಾಗುತ್ತದೆ ಎಂದು ಸಚಿವರು ಕೇಳಿದಾಗ ಆರ್ಎಫ್ಓ 50 ಸಾವಿರ ಎಂದಾಗ ನಿಮ್ಮಲ್ಲಿ ಮಿಷನ್ ತೆಗೆದುಕೊಳ್ಳುಲು ಹಣವಿಲ್ಲವೇನು? ನಿಮ್ಮಲ್ಲಿ ಹಣವಿಲ್ಲ ಅಂತ ಜನಪ್ರತಿನಿಧಿ ಬಳಿ ಕೇಳಿದ್ರಾ? ಏನ್ ಮಾಡಬೇಕು ಅಂತ ಮಾಡಿದ್ದೀರಿ ಅಂತ ಗರಂ ಆದರು. ಅಲ್ಲದೇ ಇದೇ ರೀತಿ ಅರಣ್ಯ ಹಾಗೂ ಮೆಸ್ಕಾಂ ಇಲಾಖೆಯವರು ಕೇವಲ ಮುಂದುಡದೇ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.
ಇದೇ ವೇಳೆ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ, ನಮ್ಮ ಕ್ಷೇತ್ರದ ಜನ ಕತ್ತಲೆಯಲ್ಲಿದ್ದಾರೆ. ಅವರಿಗೆ ನಾವು ಏನು ಉತ್ತರ ಕೊಡಬೇಕು ಎಂದು ಅಧಿಕಾರಿಗಳಿಗೆ ಪ್ರಶ್ನೆ ಮಾಡಿದರು. ನಿಮಗೆ ಸಮಸ್ಯೆಗಳಿದ್ದರೆ ನಮ್ಮ ಬಳಿ ಬನ್ನಿ, ನಾವು ಸಮಸ್ಯೆ ಪರಿಹರಿಸುತ್ತೆವೆ. ನೀವೆ ನಮಗೆ ಸಮಸ್ಯೆಯಾಗಬೇಡಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಈ ವೇಳೆ ಡಿಸಿ ಶಿವಕುಮಾರ್, ಜಿ.ಪಂ ಸಿಇಓ ವೈಶಾಲಿ ಹಾಜರಿದ್ದರು.