ಶಿವಮೊಗ್ಗ: ಬೆಂಗಳೂರಿನಲ್ಲಿ ಕುರುಬರ ಎಸ್ಟಿ ಹೋರಾಟಕ್ಕೆ ಸೇರಿದ್ದ ಜನಸಮೂಹ ಕಂಡು ಸಿದ್ದರಾಮಯ್ಯನವರಿಗೆ ನೋವಾಗಿದೆ ಎಂದು ಸಚಿವ ಈಶ್ವರಪ್ಪ ಟಾಂಗ್ ನೀಡಿದ್ದಾರೆ.
ಓದಿ: ಡಿಕೆಶಿ ಪುತ್ರಿಯ ಮದುವೆ ಸಂಭ್ರಮ : ಅರಿಶಿಣದಲ್ಲಿ ಮಿಂದೆದ್ದ ಐಶ್ವರ್ಯ
ಕುಲಶಾಸ್ತ್ರ ಅಧ್ಯಯನ ಬೇಕು ಎಂಬುದಕ್ಕೆ ನಮ್ಮ ಅಭಿಪ್ರಾಯವಿಲ್ಲ. ಹೋರಾಟ ಏಕೆ ಬೇಕು ಅನ್ನುವ ಮೊದಲು ಸಿದ್ದರಾಮಯ್ಯ ಸ್ಪಷ್ಟನೆ ನೀಡಲಿ ಎಂದರು. ಹೋರಾಟದಲ್ಲಿ ಭಾಗವಹಿಸುವಂತೆ ಆಹ್ವಾನಿಸಲು ಹೋದಾಗ ಪೂಜ್ಯ ಗುರುಗಳಿಗೆ, ಹೋರಾಟಕ್ಕೆ ಬರಲ್ಲ, ನೀವು ಮಾಡಿ ಎಂದಿದ್ದೀರಿ. ಆಗ ಏಕೆ ಕುಲಶಾಸ್ತ್ರ ಅಧ್ಯಯನ ಬರಲಿ, ಆಮೇಲೆ ಹೋರಾಟ ಮಾಡಿ ಅಂತ ಹೇಳಲಿಲ್ಲ. ರಾಜ್ಯದ ಎಲ್ಲಾ ಕುರುಬರ ಹೋರಾಟ ಯಶಸ್ವಿಯಾಗಿದ್ದು, ಅವರಿಗೆ ಕಿರಿಕಿರಿ ಆಗುತ್ತಿರಬಹುದು ಎಂದರು.
ನಾನಿಲ್ಲದೆ ಲಕ್ಷ ಲಕ್ಷ ಜನ ಸೇರುತ್ತಾರೆ ಎಂಬ ಕಲ್ಪನೆ ಅವರಿಗೆ ಇರಲಿಲ್ಲ. ಈಗ ಅವರಿಗೆ ಸ್ವಲ್ಪ ಕಿರಿಕಿರಿ ಆಗಿದೆ ಅನ್ನಿಸುತ್ತಿದೆ. ಹೀಗಾಗಿ ಒಂದೂಂದು ರೀತಿ ಮಾತನಾಡುತ್ತಿದ್ದಾರೆ. ನನ್ನನ್ನು ಬಿಟ್ಟು ಮೊದಲ ಬಾರಿಗೆ ಕುರುಬರು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದಾರೆ ಎಂಬ ನೋವು ಅವರಿಗೆ ಆಗಿದೆ. ನಾನು ಇಲ್ಲದಿದ್ದರೂ ಜನರು ಜಾಗೃತರಾಗಿದ್ದಾರಲ್ಲ ಅಂತ ಅವರು ಸಂತೋಷ ಪಡಬೇಕಿತ್ತು. ರಾಜಕೀಯವಾಗಿ ಯೋಚನೆ ಮಾಡಿದರೂ, ನನ್ನ ಬಿಟ್ಟು ಕುರುಬರು ಇಷ್ಟೊಂದು ಸಂಖ್ಯೆಯಲ್ಲಿ ಸೇರಿದ್ರಲ್ಲಾ ಅಂತಾ ಅವರಿಗೆ ನೋವಾಗಿದೆ.
ಮೀಸಲಾತಿ ಹೋರಾಟ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದಿಲ್ಲ. ಅಂಬೇಡ್ಕರ್ ಅವರೇ ಸಂವಿಧಾನದಲ್ಲಿ ಹೇಳಿದ್ದಾರೆ. ಶೋಷಣೆಗೆ ಒಳಗಾದ ಸಮಾಜ ಮೀಸಲಾತಿ ಪಡೆಯಬಹುದೆಂದು ತಿಳಿಸಿದ್ದಾರೆ. ಈಗ ಅನೇಕ ಸಮಾಜದ ಜನ ಜಾಗೃತರಾಗಿದ್ದಾರೆ. ಮೀಸಲಾತಿ ಸೇರ್ಪಡೆಯಿಂದ ಈಗ ಇರುವ ಯಾವುದೇ ಸಮುದಾಯಕ್ಕೆ ತೊಂದರೆ ಆಗುವುದಿಲ್ಲ ಎಂದರು.
ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ನಡೆಸಲು ಬಿಜೆಪಿ ಹೆದರುವುದಿಲ್ಲ. ನಮ್ಮ ಸರ್ಕಾರ ಚುನಾವಣೆ ನಡೆಸಲು ಸಿದ್ಧವಿದೆ. ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಬೇಕೆಂದು ಬಹಳ ಜನ ಪ್ರಯತ್ನ ಮಾಡಿದರು. ನಾವು ಚುನಾವಣೆ ನಡೆಸಿದ್ವಿ. ಈಗ ಗ್ರಾಮ ಪಂಚಾಯತ್ ಸದಸ್ಯರಿಗೆ ತರಬೇತಿ ನೀಡಲು ಸಿದ್ಧತೆ ನಡೆಸಿದ್ದೇವೆ. ತಾಲೂಕು ಪಂಚಾಯತ್ ರದ್ದಾಗಬೇಕು ಎಂಬುದು ಅನೇಕರ ವಾದ, ಇದು ನನ್ನ ವಾದವೂ ಹೌದು ಎಂದರು.
ಈಗ ನಮ್ಮ ಸಂವಿಧಾನದಲ್ಲಿ ಮೂರು ಹಂತದ ಆಡಳಿತಕ್ಕೆ ಒತ್ತು ನೀಡಲಾಗಿದೆ. ಈಗ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ನಡೆಸುತ್ತೇವೆ. ತಾಪಂ ರದ್ದು ಮಾಡುವ ಕುರಿತು ಬ್ಯುಸಿನೆನ್ ಅಡ್ವೈಸರಿ ಕಮಿಟಿ ಮುಂದೆ ಚರ್ಚೆ ನಡೆಸಲಾಗಿದೆ. ಈ ಕುರಿತು ಸಭಾಪತಿ ಸೇರಿದಂತೆ ಅನೇಕ ಪಕ್ಷದ ಮುಖಂಡರ ಜೊತೆ ಚರ್ಚೆ ನಡೆಸಿದ್ದೆವೆ. ಈ ಕುರಿತು ಅಧಿವೇಶನದಲ್ಲಿ ಚರ್ಚೆ ನಡೆಸಿ, ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು. ಚುನಾವಣಾ ಆಯೋಗ ಕ್ಷೇತ್ರ ಪುನರ್ ವಿಂಗಡಣೆ ಆಗಬೇಕು ಎಂದು ತಿಳಿಸಿದೆ ಎಂದರು.