ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಪರೀಕ್ಷೆ ಹೆಚ್ವಾಗುತ್ತಿರುವುದರಿಂದ ಸೋಂಕಿತರ ಸಂಖ್ಯೆಯು ಸಹ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಇಂದು ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಸೋಂಕಿತರ ಸಂಖ್ಯೆ ಹೆಚ್ಚಾಗಿ ಕ್ರಮೇಣ ಕಡಿಮೆಯಾಗುವ ಸಾಧ್ಯತೆಗಳಿವೆ. ಮುಂದಿನ ದಿನಗಳಲ್ಲಿ ಪ್ರತಿನಿತ್ಯ 2 ಸಾವಿರದ ತನಕ ಪರೀಕ್ಷೆ ನಡೆಸಲಾಗುವುದು ಎಂದರು. ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಏನೇನು ಅನುಕೂಲಗಳು ಬೇಕು ಎನ್ನುಬ ಬಗ್ಗೆ ಸಿಮ್ಸ್ ನಿರ್ದೇಶಕರು, ಡಿಸಿ, ಡಿಹೆಚ್ಒ ಜೊತೆ ಚರ್ಚೆ ನಡೆಸಲಾಗಿದೆ. ಡಿ ಗ್ರೂಪ್ ನೌಕರರ ನೇಮಕ, 50 ಜನ ನರ್ಸ್ಗಳು ಬೇಕು ಎಂದು ಕೇಳಿದ್ರು. ಅದೇ ರೀತಿ 25 ಮಂದಿ ವೈದ್ಯರು ಬೇಕು ಎಂದು ಕೇಳಿದ್ದಾರೆ. ಯಾರು ವೈದ್ಯಕೀಯ ಕೋರ್ಸ್ ಮುಗಿಸುತ್ತಾರೋ ಅವರಿಗೆ 1 ಸರ್ಕಾರಿ ಸೇವೆ ಕಡ್ಡಾಯವಾಗಿರುವ ಸಂದರ್ಭದಲ್ಲಿ ಯಾರ್ಯಾರು ಬರುತ್ತಾರೋ ಅವರಿಗೆ ಇಲ್ಲಿ ನೇಮಕಕ್ಕೆ ಅವಕಾಶ ಮಾಡಿಕೊಳ್ಳಗಿದೆ.
ಖಾಸಗಿ ವೈದ್ಯರು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಬೇಕು ಎಂದು ಬೇರೆ ರಾಜ್ಯದಲ್ಲಿ ಆದೇಶವಿದೆ. ಆದರೆ ನಮ್ಮಲ್ಲಿ ಆ ಆದೇಶ ಇನ್ನೂ ಮಾಡಿಲ್ಲ. ಖಾಸಗಿ ವೈದ್ಯರು ಸಮಾಜ ಸೇವೆ ಎಂದು ತಿಳಿದು ಸೇವೆಗೆ ಮುಂದಾಗಬೇಕು. ಅವರಿಗೆ ಏನು ಹಣ ನೀಡಬೇಕೋ ಅದನ್ನು ನೀಡಲು ತಯಾರಿದ್ದೇವೆ. ಭದ್ರಾವತಿ, ಶಿಕಾರಿಪುರ ಹಾಗೂ ತೀರ್ಥಹಳ್ಳಿಯಲ್ಲಿ ಸಾಕಷ್ಟು ವ್ಯವಸ್ಥೆ ಮಾಡಲಾಗಿದೆ. ಸೋಂಕಿತರು ಹೆಚ್ಚಾದರೂ ಸಹ ನಾವು ಸೂಕ್ತ ಚಿಕಿತ್ಸೆ ನೀಡಲು ತಯಾರಿದ್ದೇವೆ. ಕೋವಿಡ್ ಪರೀಕ್ಷೆಯನ್ನು ಎಲ್ಲಾ ಕಡೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಇನ್ನು ಖಾಸಗಿ ಆಸ್ಪತ್ರೆಯವರು ಸೋಂಕಿತರನ್ನು ಕೊನೆ ವೇಳೆಯಲ್ಲಿ ಮೆಗ್ಗಾನ್ಗೆ ಕಳುಹಿಸುತ್ತಿದ್ದಾರೆ. ಇದು ಅಪರಾಧ. ಅಂತಹವರಿಗೆ ನೋಟಿಸ್ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದರು.