ಶಿವಮೊಗ್ಗ: ಹಾಲಿ ಗ್ರಾಮ ಪಂಚಾಯತ್ ಸದಸ್ಯರನ್ನು ಮುಂದಿನ ಚುನಾವಣೆಯವರೆಗೂ ಮುಂದುವರೆಸುವಂತೆ ಆಗ್ರಹಿಸಿ ಸಾಗರದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ.
ತಾಲೂಕಿನ ಉಪ ವಿಭಾಗಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಸಾಗರ ಬ್ಲಾಕ್ ಕಾಂಗ್ರೆಸ್, ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿತು. ಈ ವೇಳೆ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್ ಸೇರಿದಂತೆ ಬ್ಲಾಕ್ ಕಾಂಗ್ರೆಸ್ನ ಸದಸ್ಯರು ಕೂಡ ಭಾಗವಹಿಸಿದ್ದರು.
ಈ ತಿಂಗಳಲ್ಲಿ ಗ್ರಾಮ ಪಂಚಾಯತ್ ಸದಸ್ಯರ ಅವಧಿ ಮುಗಿಯುತ್ತದೆ. ಮುಂದಿನ ಚುನಾವಣೆವರೆಗೂ ಬಿಜೆಪಿ ಸರ್ಕಾರ ಆಡಳಿತಾಧಿಕಾರಿಯ ಜೊತೆ ಸ್ಥಳೀಯರನ್ನು ನೇಮಕ ಮಾಡಿ ಆಡಳಿತ ಸಮಿತಿ ರಚನೆ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಇದು ಪ್ರಜಾಪ್ರಭುತ್ವದ ವಿರೋಧಿಯಾಗಿದೆ. ಹೀಗಾಗಿ ಹಾಲಿ ಸದಸ್ಯರನ್ನೇ ಮುಂದಿನ ಚುನಾವಣೆವರೆಗೂ ಮುಂದುವರೆಸಿ ಎಂದು ಆಗ್ರಹಿಸಿ ಜಿಲ್ಲೆಯ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.