ಶಿವಮೊಗ್ಗ: ನಗರದ ಹೊರ ವಲಯದಲ್ಲಿರುವ ಅಬ್ಬಲಗೆರೆಯಲ್ಲಿ ಈ ಬಾರಿಯ ಮಹಾಶಿವರಾತ್ರಿ ಉತ್ಸವವನ್ನು ಪ್ರಕೃತಿ ಸಂರಕ್ಷಣೆಯ ಸಂದೇಶದೊಂದಿಗೆ ವಿಶಿಷ್ಟವಾಗಿ ಆಚರಿಸಲಾಗಿದೆ.
ಸ್ಥಳೀಯ ನಿವಾಸಿ ನವ್ಯಶ್ರೀ ನಾಗೇಶ ಅವರು ಈಶ್ವರವನವನ್ನು ನಿರ್ಮಿಸಿ ಪ್ರಕೃತಿ ಸಂರಕ್ಷಣೆಯ ಸಂದೇಶ ಸಾರುತ್ತಿದ್ದು, ವನದಲ್ಲಿ ಅನಾಥವಾಗಿ ಬಿಸಾಡಿದ ದೇವರ ವಿಗ್ರಹಗಳನ್ನು ತಂದು ಪೂಜಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಜನೆ, ಪ್ರಕೃತಿ ಉಳಿಸುತ್ತಿರುವ ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ. 'ಪ್ರಕೃತಿ ಎಂದರೇನೆ ಶಿವ, ಹಾಗಾಗಿ ಪ್ರಕೃತಿ ಮಡಿಲಿನಲ್ಲಿಯೇ ಶಿವರಾತ್ರಿ ಆಚರಿಸಲಾಗುತ್ತಿದೆ. ಪ್ರಸ್ತುತ ಸನ್ನಿವೇಶದಲ್ಲಿ ಅರಣ್ಯ ಉಳಿಸುವ ಅನಿವಾರ್ಯತೆ ಇದೆ. ಹಾಗಾಗಿ, ಕಾಡಿನ ಬಗ್ಗೆ ಜಾಗೃತಿ ಸಹ ಮೂಡಿಸಲಾಗುತ್ತಿದೆ' ಎನ್ನುತ್ತಾರೆ ಈಶ್ವರ ವನದ ಕರ್ತೃ ನವ್ಯಶ್ರೀ ನಾಗೇಶ.
ಈಶ್ವರವನದಲ್ಲಿ ಮೂವತ್ತಕ್ಕೂ ಹೆಚ್ಚು ಬಗೆಯ 300ಕ್ಕೂ ಹೆಚ್ಚು ಮರಗಳನ್ನು ಬೆಳೆಸುವ ಮೂಲಕ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಹಾಗೂ ಪ್ರತಿ ಮರಕ್ಕೂ ದೇವರ ನಾಮಗಳ ಫಲಕವನ್ನು ಹಾಕುವ ಮೂಲಕ ಪ್ರಕೃತಿಯಲ್ಲಿ ದೇವರನ್ನು ಕಾಣಿ ಎಂಬ ಸಂದೇಶ ನೀಡಲಾಗಿದೆ.ಇಲ್ಲಿನ ಮತ್ತೊಂದು ವಿಶೇಷವೆಂದರೆ, ಪ್ರಕೃತಿಯಲ್ಲಿ ನಿರ್ಮಾಣವಾಗಿರುವ ಈಶ್ವರನಿಗೆ ಯಾವುದೇ ಕಾಣಿಕೆ ಹಾಕುವಂತಿಲ್ಲ ಹಾಗೂ ಇಲ್ಲಿ ಗಂಟೆಯನ್ನೂ ಬಳಸುವಂತಿಲ್ಲ ಎಂಬ ನಿಯಮವನ್ನು ಪ್ರಾಣಿಗಳ ಹಿತದೃಷ್ಟಿಯಿಂದ ರೂಪಿಸಿದ್ದಾರೆ.
ಓದಿ: ಮಹಾಶಿವರಾತ್ರಿ ಸಂಭ್ರಮ: ಹಣ್ಣಿನಲ್ಲಿ ಮೂಡಿದ ಶಿವಲಿಂಗ
ಸಾಮಾನ್ಯವಾಗಿ ಶಿವರಾತ್ರಿಯೆಂದರೆ ದೇವಾಲಯದಲ್ಲಿ ಹಾಗೂ ಮನೆಗಳಲ್ಲಿ ಭಜನೆ, ಪೂಜೆ ಮಾಡಲಾಗುತ್ತದೆ. ಆದರೆ ಇವರು ಪ್ರಕೃತಿಯಲ್ಲಿಯೇ ಪರಶಿವನನ್ನು ಕಂಡು, ವನ್ಯಜೀವಿಗಳ ರಕ್ಷಣೆಗೆ ಮುಂದಾಗಿರುವುದು ಸಾರ್ವಜನಿಕರಿಗೆ ಸಂತಸ ತಂದಿದೆ.