ಶಿವಮೊಗ್ಗ: ಇಂದು ನನ್ನ ಹುಟ್ಟುಹಬ್ಬ, ಇಂದಿನಿಂದಲೇ ನನ್ನ ಬದಲಾವಣೆಯ ಪರ್ವ ಪ್ರಾರಂಭವಾಗುತ್ತದೆ ಎನ್ನುವ ಮೂಲಕ ಜೆಡಿಎಸ್ ಯುವ ಘಟಕದ ಕಾರ್ಯಾಧ್ಯಕ್ಷ ಮಧು ಬಂಗಾರಪ್ಪ ತಮ್ಮ ರಾಜಕೀಯ ಬದಲಾವಣೆಯ ಸುಳಿವು ನೀಡಿದ್ದಾರೆ.
ಇಂದು ನಗರದಲ್ಲಿ ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡರು. ಈ ವೇಳೆ ಮಾತನಾಡಿದ ಅವರು, ನಾನು ಸುಮಾರು ಒಂದೂವರೆ ವರ್ಷಗಳಿಂದ ರಾಜಕೀಯದಿಂದ ದೂರವಿದ್ದೆ. ಆದರೆ ರಾಜಕಾರಣಿಯಾಗಿ ಮುಂದುವರೆಯಬೇಕಾಗುತ್ತದೆ ಎಂದರು.
ಈಗ ನನ್ನ ತಂದೆ ಇಲ್ಲ. ಅವರ ಸ್ಥಾನದಲ್ಲಿ ಅವರ ಅಭಿಮಾನಿಗಳು ಹಾಗೂ ವಿವಿಧ ಪಕ್ಷದ ಹಿರಿಯರ ಜೊತೆ ಚರ್ಚೆ ನಡೆಸಿ, ರಾಜಕೀಯ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ನನ್ನ ಬದಲಾವಣೆ ಯಾವ ರೀತಿ ಆಗುತ್ತದೆ ಎಂದು ನಾನು ನಂತರ ತಿಳಿಸುತ್ತೇನೆ ಎಂದರು.
ನಾನು ಸುಮ್ಮನೆ ಕೂರಲು ಆಗಲ್ಲ. ಇಂದು ನನ್ನ ಹುಟ್ಟುಹಬ್ಬ, ನಾನು ಹೆಚ್ಚು ಸುಳ್ಳು ಹೇಳಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು. ನನ್ಮ ರಾಜಕೀಯ ಬದಲಾವಣೆಯಿಂದ ಅನುಕೂಲವಾಗುತ್ತದೆ. ನನಗೆ ಎಲ್ಲಾ ಪಕ್ಷದಲ್ಲೂ ಸಹ ಸ್ನೇಹಿತರಿದ್ದಾರೆ. ಇದರಿಂದ ನನಗೆ ಯಾವ ಪಕ್ಷದದಲ್ಲೂ ವಿರೋಧಿಗಳೇ ಇಲ್ಲ ಎಂದು ಮಾಜಿ ಶಾಸಕ ಹೇಳಿದರು.
ಜೆಡಿಎಸ್ನಲ್ಲಿ ನನ್ನನ್ನು ಚೆನ್ನಾಗಿಯೇ ನಡೆಸಿಕೊಂಡಿದ್ದಾರೆ:
ಜೆಡಿಎಸ್ನಲ್ಲಿ ನನ್ನನ್ನು ತುಂಬ ಚೆನ್ನಾಗಿಯೇ ನಡೆಸಿಕೊಂಡಿದ್ದಾರೆ. ಜೆಡಿಎಸ್ನಲ್ಲಿ ನಿರ್ಧಾರ ತೆಗೆದುಕೊಳ್ಳುವಂತಹ ದೊಡ್ಡ ವ್ಯಕ್ತಿ ನಾನಲ್ಲ. ಕೆಲ ನಿರ್ಧಾರಗಳನ್ನು ತೆಗೆದುಕೊಂಡಿದ್ದು ತಪ್ಪಾಗಿದೆ ಎಂದು ನಮ್ಮ ಪಕ್ಷದ ವರಿಷ್ಠರೇ ತಿಳಿಸಿದ್ದಾರೆ. ನಾನು ಪಕ್ಷ ಬಿಡುವ ಬಗ್ಗೆ ಎಲ್ಲೂ ಚರ್ಚೆ ನಡೆಸಿಯೇ ಇಲ್ಲ. ಈಗಲೂ ಜೆಡಿಎಸ್ ಬಿಟ್ಟಿಲ್ಲ, ಕಾಂಗ್ರೆಸ್ ಸೇರಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಅನಿವಾರ್ಯ ಕಾರಣಗಳಿಂದ ಜೆಡಿಎಸ್ ಕಚೇರಿಗೆ ಹೋಗಲು ಆಗಿಲ್ಲ. ನಮ್ಮ ಚುನಾವಣೆಯಲ್ಲಿ ಕಾರ್ಯಕರ್ತರು ಹೊಡೆದಾಡಿಕೊಂಡಿರುತ್ತಾರೆ. ಅವರ ಬಗ್ಗೆ ಒಬ್ಬ ನಾಯಕನಾಗಿ ಯೋಚನೆ ಮಾಡಬೇಕಿದೆ ಎಂದರು.
ನಾನು ಜಿ.ಪಂ ಹಾಗೂ ತಾ.ಪಂ ಚುನಾವಣೆಗೂ ಮುನ್ನವೇ ಒಂದು ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತೇನೆ. ಚುನಾವಣೆಯ ಸಂದರ್ಭದಲ್ಲಿ ಪಕ್ಷ ಸೇರ್ಪಡೆಯಾಗುವುದು ಸರಿಯಲ್ಲ. ಇದನ್ನು ಯಾರೂ ಮಾಡಬಾರದು ಎಂದು ಮಧು ಬಂಗಾರಪ್ಪ ಹೇಳಿದ್ರು.