ಸೊರಬ(ಶಿವಮೊಗ್ಗ): ಮಾಜಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಪುತ್ರಿ ರಾಜನಂದಿನಿ ಅವರು ಬಿಜೆಪಿ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸೊರಬ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದರು. ಪಟ್ಟಣದ ಬಂಗಾರಧಾಮದ ಕಾಂಗ್ರೆಸ್ ಚುನಾವಣಾ ನಿರ್ವಹಣಾ ಕಚೇರಿಯಲ್ಲಿ ವಿವಿಧ ಪಕ್ಷಗಳ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.
ರಾಜನಂದಿನಿ ಅವರ ಬಿಜೆಪಿ ಸೇರ್ಪಡೆಯಿಂದ ಯಾವುದೇ ಪರಿಣಾಮ ಬೀರದು. ಈ ಬಗ್ಗೆ ಅವರ ತಂದೆ ಕಾಗೋಡು ತಿಮ್ಮಪ್ಪ ಅವರೇ ಹೇಳಿದ್ದಾರೆ. ಇನ್ನು, ರಾಜ್ಯದಲ್ಲಿ ಕಾಂಗ್ರೆಸ್ ಕನಿಷ್ಟ 125 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಈ ಕ್ಷೇತ್ರಕ್ಕೆ ಶಾಸಕನಾದೆ ಹೊರತು, ಬರಿ ನಮ್ಮ ಕಾರ್ಯಕರ್ತರಿಗೆ, ನಾಯಕರಿಗೆ ಅಲ್ಲ. ಯಾರೇ ನನ್ನ ಬಳಿ ಬಂದರು ಅವರಿಗೆ ಕೆಲಸ ಮಾಡುವಂತಹ ಮನೋಭಾವ ಇಟ್ಟುಕೊಂಡೆ. ನನ್ನುನ್ನು ಎಐಸಿಸಿ ಸದಸ್ಯನನ್ನಾಗಿ ಮಾಡಿದ್ದಾರೆ. ನಾನು ಕೇಳದೇ ಇದ್ದರೂ ಆ ಸ್ಥಾನವನ್ನು ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ 102 ಜನರನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿ ನಾನೂ ಒಬ್ಬ. ಎಐಸಿಸಿ ಸದಸ್ಯನಾಗುವುದು ಪಕ್ಷಕ್ಕೆ ದೊಡ್ಡ ಗೌರವ ಅದು. ಮತ್ತು ನಾನು ಕೆಲವರಿಗೆ ಟಿಕೆಟ್ ಕೊಡಿಸಲು ಮಾತನಾಡಿದ್ದೇನೆ ಎಂದು ಮಧು ಬಂಗಾರಪ್ಪ ಇದೇ ಸಂದರ್ಭದಲ್ಲಿ ಹೇಳಿದರು.
ಇದನ್ನೂ ಓದಿ:ಬಿಜೆಪಿಯ ಸಂಭಾವ್ಯ ಸಿಎಂ ಅಭ್ಯರ್ಥಿಗಳಿಗೆ ಟಿಕೆಟ್ ಸಿಗದಂತೆ ಪ್ರಹ್ಲಾದ ಜೋಶಿ ಮಾಡಿದ್ದಾರೆ; ಯು ಟಿ ಖಾದರ್