ಶಿವಮೊಗ್ಗ: "ನನ್ನ ವೈಯಕ್ತಿಕ ವಿಚಾರದಲ್ಲಿ ಬಿಜೆಪಿಯವರು ನಾನು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಆದರೆ ಅವರೇ ಭ್ರಷ್ಟಾಚಾರದ ಆರೋಪ ಹೊತ್ತಿದ್ದಾರೆ. ನನ್ನ ರಾಜೀನಾಮೆ ಕೇಳುವ ಮೊದಲು ಬಿಜೆಪಿಯವರೇ ರಾಜೀನಾಮೆ ನೀಡಬೇಕು" ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಗ್ರಹಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, "ನನ್ನ ಖಾಸಗಿ ವಿಷಯಗಳ ಕುರಿತು ಸುದ್ದಿ ಮಾಡುವಾಗ ಮಾಧ್ಯಮದವರು ನನ್ನನ್ನು ಕೇಳುವುದು ಉತ್ತಮ. ಹಳಸಿಹೋದ ವಿಚಾರವನ್ನು ತೆಗೆದುಕೊಂಡು ಸುದ್ದಿ ಮಾಡುವುದು ಸರಿಯಲ್ಲ. ಖಾಸಗಿ ವಿಷಯಕ್ಕೆ ಕೈ ಹಾಕುವಾಗ ನೋಡಿ ಸುದ್ದಿ ಮಾಡಿ" ಎಂದರು.
"ಬಿಜೆಪಿಯವರು ಇಂತಹ ವಿಚಾರಗಳಿಗೆ ಸುಮ್ಮನೆ ಪೋಸ್ಟ್ ಮಾಡುತ್ತಾರೆ. ಯಾರ ಮೇಲೆ ಭ್ರಷ್ಟಾಚಾರದ ಆರೋಪ ಬಂದಿದೆಯೋ ಅವರೇ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅರ್ ಅಶೋಕ್, ಬಿ ವೈ ವಿಜಯೇಂದ್ರ, ಎಂಎಲ್ಸಿ ರವಿಕುಮಾರ್ ವಿರುದ್ಧ ಕಿಡಿಕಾರಿದರು. ಇವರು ಗ್ರಾಮ ಪಂಚಾಯತಿ ಚುನಾವಣೆ ನಿಂತರೂ ಗೆಲ್ಲುವುದಿಲ್ಲ. ಅವರು ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಆರ್. ಅಶೋಕ್ ಮೇಲೆ ಅವರದೇ ಪಕ್ಷದ ಯತ್ನಾಳ್ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ನನ್ನ ರಾಜೀನಾಮೆ ಕೇಳಲು ನಿಮಗೆ ಯಾವ ನೈತಿಕತೆ ಇದೆ" ಎಂದು ಪ್ರಶ್ನಿಸಿದರು.
''ನೀವು ಸಾವಿನಲ್ಲೂ ಭ್ರಷ್ಟಾಚಾರ ಮಾಡಿದವರು. ನಾನು ನಿಮ್ಮ ರಾಜೀನಾಮೆ ಕೇಳಲ್ಲ, ನೀವೇ ರಾಜೀನಾಮೆ ನೀಡಬೇಕು. ಬೆಂಗಳೂರಿನ ಉತ್ತರಹಳ್ಳಿಯ ಆಶ್ರಯ ಬಡಾವಣೆಯಲ್ಲಿ ಸೈಟ್ ನೀಡುವಲ್ಲೂ ಅವ್ಯವಹಾರ ನಡೆಸಿದ್ದ ದಾಖಲೆ ತೆಗೆಯುತ್ತಿದ್ದೇನೆ. ಹಿಂದೆ ಬಿಜೆಪಿಗೆ ಬಂಗಾರಪ್ಪ ಹೋಗದೆ ಇದ್ದಿದ್ರೆ, ಬಿಜೆಪಿ 60 ಸೀಟು ಸಹ ಗೆಲ್ಲುತ್ತಿರಲಿಲ್ಲ. ಸಂಸದ ಕಟೀಲ್ ಅವರಿಗೆ ಅವರದೇ ಆರ್ಎಸ್ಎಸ್ ಹಾಗೂ ಬಜರಂಗದಳದವರು ಗೋ ಬ್ಯಾಕ್ ಎಂದು ಹೇಳಿದ್ರು, ಟೈರ್ ಪಂಕ್ಚರ್ ಮಾಡಿದ್ರು, ನಿಮಗೆ ಮಾನ ಮಾರ್ಯಾದೆ ಇದ್ರೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ತೆಗೆದುಕೊಂಡು ಬನ್ನಿ. ನಾನೇ ನಿಮ್ಮ ಕ್ಷೇತ್ರಕ್ಕೆ ಬರುತ್ತೇನೆ" ಎಂದು ಸವಾಲು ಹಾಕಿದರು.
"ನಮ್ಮ ತಂದೆಯನ್ನು ಭ್ರಷ್ಟಾಚಾರ ಇಲ್ಲದಂತೆ ಕಾಪಾಡಿದ್ದೇನೆ. ನಾನು ಬೇರೆಯವರ ರೀತಿ ನಕಲಿ ಸಹಿ ಮಾಡಿಲ್ಲ. ತಂದೆಯನ್ನು ಜೈಲಿಗೆ ಕಳುಹಿಸಿಲ್ಲ. ನನ್ನ ತಟ್ಟೆ ಕ್ಲೀನ್ ಇದೆ. ವಿಜಯೇಂದ್ರ ಅವರೇ ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ನೋಡಿಕೊಳ್ಳಿ. ನಿಮ್ಮ ಶಿಕಾರಿಪುರ ಕ್ಷೇತ್ರಕ್ಕೆ ನೀರಾವರಿ ಆಗಿದ್ದು, ನನ್ನ ಪಾದಯಾತ್ರೆಯಿಂದ. ನಿಮ್ಮ ಕಾರ್ಯಕರ್ತರು, ಶಕ್ತಿ ಯೋಜನೆ, ಗೃಹಲಕ್ಷ್ಮಿ ಯೋಜನೆಯನ್ನು ಬಳಸಿಕೊಂಡಿದ್ದಾರೆಯೇ ಹುಡುಕಿ, ನಿಮಗೆ ನೈತಿಕತೆ ಇದ್ದರೆ ಸರ್ಕಾರದ ಯೋಜನೆ ಬಳಸಿಕೊಳ್ಳಬೇಡಿ" ಎಂದು ಮಧು ಬಂಗಾರಪ್ಪ ಟಾಂಗ್ ಕೊಟ್ಟರು.
ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ರೈತರ ಪರ ಸರ್ಕಾರ: "ಸಕ್ಕರೆ ಕಾರ್ಖಾನೆ ಕುರಿತು ಬಿಜೆಪಿ ನಾಯಕರು ನನ್ನ ಬಗ್ಗೆ ಮಾತನಾಡಿದ್ದಾರೆ. ನಾವು ಅಧಿಕಾರಕ್ಕೆ ಬಂದು 7 ತಿಂಗಳಾಗಿವೆ. ಹಿಂದೆ ಇವರೇ ಅಧಿಕಾರದಲ್ಲಿದ್ದಾಗ ಏನು ಮಾಡಿದ್ರು. ರೈತರಿಗೆ ಅನ್ಯಾಯ ಮಾಡಿದ್ದು ನೀವೇ. ಶಿಕಾರಿಪುರದಲ್ಲಿನ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ರೆ, ಮಾಜಿ ಸಿಎಂ ಯಡಿಯೂರಪ್ಪ, ಸಂಸದ ಬಿ ವೈ ರಾಘವೇಂದ್ರ ಹಾಗೂ ಶಾಸಕ ಬಿ ವೈ ವಿಜಯೇಂದ್ರ ಅವರು ಸಿದ್ದರಾಮಯ್ಯ ಅವರಿಗೆ ಫೋನ್ ಮಾಡಿ ವರ್ಗಾವಣೆ ಮಾಡಬೇಡಿ ಎಂದು ಹೇಳುತ್ತಿದ್ದಾರೆ. ನಾವು ಕೊಡಿಸುವವರೇ ಹೊರತು, ಕಿತ್ತುಕೊಳ್ಳುವವರಲ್ಲ. ಅರಣ್ಯ ಒತ್ತುವರಿ ಎಷ್ಟಾಗಿದೆ ಎಂದು ಲೆಕ್ಕ ಕೊಡಲೇ. ತುಂಗಭದ್ರಾ ಸಕ್ಕರೆ ಕಾರ್ಖಾನೆ ವಿಷಯದಲ್ಲಿ ರೈತರು ಭಯಪಡುವುದು ಬೇಡ" ಎಂದರು.
ಪ್ರತಾಪ ಸಿಂಹ ಅವರ ತಮ್ಮ ದೊಡ್ಡ ಅಂಜುಬುರುಕನಾ?: "ಸಂಸದ ಪ್ರತಾಪ ಸಿಂಹ ಅವರ ತಮ್ಮನನ್ನು ಅರೆಸ್ಟ್ ಮಾಡಿಸಿದ್ದು, ಮಧು ಬಂಗಾರಪ್ಪ ಅವರ ವಿಷಯವನ್ನು ಬೇರೆ ಕಡೆ ಡೈವರ್ಟ್ ಮಾಡಲು ಎಂದು ಹೇಳಿದ್ದು ಎಷ್ಟು ಸರಿ? ಅವರ ತಮ್ಮ ಏನ್ ದೊಡ್ಡ ಅಂಜುಬುರುಕನಾ" ಎಂದ ಪ್ರಶ್ನಿಸಿದರು. "ರಾಮಮಂದಿರದ ವಿಚಾರದಲ್ಲಿ ಭ್ರಷ್ಟಾಚಾರ ನಡೆಸಿದ್ದ ವಿಷಯ ಬರುತ್ತಿದೆ. ಈ ಬಗ್ಗೆ ಪ್ರಧಾನಿ ಮೋದಿ ಅವರು ತನಿಖೆ ನಡೆಸಬೇಕು. ಶ್ರೀರಾಮ ಬಿಜೆಪಿಗೆ, ಕಾಂಗ್ರೆಸ್ ಹಾಗೂ ಜೆಡಿಎಸ್ಗೂ ಸೇರಿದವ" ಎಂದು ಹೇಳಿದರು.
ಧಾರ್ಮಿಕ ಭಾವನೆ ಮೇಲೆ ಬಿಜೆಪಿಗೆ ಇನ್ನು ಮತ ಬರಲ್ಲ: "ಧಾರ್ಮಿಕ ಭಾವನೆ ಮೂಲಕ ಬಿಜೆಪಿಗೆ ಇನ್ನು ಮುಂದೆ ಮತ ಬರಲ್ಲ. ಈಗ ಶೇ 80ರಷ್ಟು ಜನರಿಗೆ ಗ್ಯಾರಂಟಿ ಯೋಜನೆ ತಲುಪಿದೆ. ಜನರ ಸಂಕಷ್ಟಕ್ಕೆ ಸ್ಪಂದಿಸಿರುವುದು ಕಾಂಗ್ರೆಸ್ ಸರ್ಕಾರ ಎಂದು ಜನರಿಗೆ ಅರ್ಥವಾಗಿದೆ" ಎಂದು ಹೇಳಿದರು. ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್, ಆಯನೂರು ಮಂಜುನಾಥ್, ಎಸ್ ಪಿ ದಿನೇಶ್ ಸೇರಿ ಇತರರಿದ್ದರು.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧನ ಖಂಡಿಸಿ ನಾಳೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ - ವಿಜಯೇಂದ್ರ