ಶಿವಮೊಗ್ಗ: ಶಾಸಕ ಜಿ.ಸೋಮಶೇಖರ್ ರೆಡ್ಡಿಯವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದಿಂದ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜ.3ರಂದು ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ದೇಶಭಕ್ತ ನಾಗರಿಕರ ವೇದಿಕೆ, ಬಳ್ಳಾರಿ ಇವರು ಆಯೋಜಿಸಿದ್ದ, ಸಿಎಎ ಕಾಯ್ದೆ ಬೆಂಬಲಿಸಿ ನಡೆದ ಬೃಹತ್ ಸಭೆಯಲ್ಲಿ ಜಿ. ಸೋಮಶೇಖರ್ ರೆಡ್ಡಿಯವರು ಸಂವಿಧಾನ ಬದ್ದವಾದ ಜನ ಪ್ರತಿನಿಧಿಯಾಗಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ನಗರದಲ್ಲಿ ಶಾಂತಿ ಭಂಗ ಉಂಟು ಮಾಡುವಂತಹ ಹಾಗೂ ಕೋಮು ಗಲಭೆಗೆ ಪ್ರಚೋದನೆ ನೀಡುವಂತಹ ಹೇಳಿಕೆಗಳನ್ನು ನೀಡಿದ್ದಾರೆ.
ರಾಜ್ಯ ಮತ್ತು ದೇಶದಲ್ಲಿ ಅಶಾಂತಿಯನ್ನು ಸೃಷ್ಠಿಮಾಡುವಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿರುವ ಇವರ ಮೇಲೆ ದೇಶದ್ರೋಹಿ ಎಂದು ದೂರು ದಾಖಲಿಸಿ, ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದಿಂದ ಮನವಿ ಸಲ್ಲಿಸಿದರು.