ಶಿವಮೊಗ್ಗ: ರಾಜ್ಯದ ಸಂಪ್ರದಾಯಿಕ ವಿಶ್ವವಿದ್ಯಾನಿಲಯಗಳಲ್ಲೂ ದೂರ ಶಿಕ್ಷಣ ಕೋರ್ಸ್ ನಡೆಸಲು ಅನುಮತಿ ನೀಡಬೇಕು ಎಂದು ಕುವೆಂಪು ವಿವಿ ನಿಯೋಗ ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡಿ ವಿನಂತಿ ಮಾಡಿಕೊಂಡಿದೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವೀರಭದ್ರಪ್ಪ ತಿಳಿಸಿದ್ದಾರೆ.
ನಗರದ ಪ್ರೆಸ್ ಟ್ರಸ್ಟ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುವೆಂಪು ವಿಶ್ವ ವಿದ್ಯಾನಿಲಯವೂ ಸಂಪ್ರದಾಯಿಕ ಶಿಕ್ಷಣದ ಜೊತೆಗೆ ದೂರ ಶಿಕ್ಷಣವನ್ನು ನೀಡುತ್ತಾ ಬಂದಿದೆ. ನಮ್ಮ ವಿಶ್ವವಿದ್ಯಾನಿಲಯದಲ್ಲಿ ಪ್ರತಿ ವರ್ಷ 30 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳುತ್ತಾರೆ. ಕುವೆಂಪು ವಿವಿಯಲ್ಲಿ ನೀಡುವ ದೂರ ಶಿಕ್ಷಣವು ರಾಜ್ಯಕ್ಕೆ ಹೆಸರುವಾಸಿಯಾಗಿದೆ ಎಂದರು.
2019ರ ಹೊಸ ಶಿಕ್ಷಣ ನೀತಿಯಲ್ಲಿ ಸಂಪ್ರದಾಯಿಕ ವಿವಿಗಳು ದೂರ ಶಿಕ್ಷಣ ನೀಡುವಂತಿಲ್ಲ ಎಂದು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ. ಇದರಿಂದ ಸಾಂಪ್ರದಾಯಿಕ ವಿವಿಗಳಿಗೂ ಸಹ ದೂರ ಶಿಕ್ಷಣ ನಡೆಸುವ ಅವಕಾಶ ಕಲ್ಪಿಸಿ ಕೊಡುವಂತೆ ನಮ್ಮ ಕುವೆಂಪು ವಿವಿಯ ನಿಯೋಗ ಭೇಟಿ ಮಾಡಿ ವಿನಂತಿಸಿಕೊಂಡಿದೆ. ಇದಕ್ಕೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.