ಶಿವಮೊಗ್ಗ: ಭಾರತ ದೇಶದ ಬಲವೇ ವಿವಿಧತೆಯಲ್ಲಿ ಏಕತೆ. ಎಲ್ಲಾ ಧರ್ಮ, ತತ್ವ ಸಿದ್ಧಾಂತಗಳಿಗೂ ಈ ದೇಶ ನೆಲೆಯಾಗಿದೆ ಎಂದು ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಶರಣರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಕುವೆಂಪು ಜನ್ಮದಿನದ ಅಂಗವಾಗಿ ನಡೆದ ಸಂವಿಧಾನ ಪ್ರಸ್ತಾವನೆಯ ಓದು, ಕುವೆಂಪು ಗೀತಗಾಯನ, ನಾಡಗೀತೆ ವಾಚನ ಮತ್ತು ಸರ್ವಧರ್ಮ ಸಹಭೋಜನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುವೆಂಪು, ಡಾ ಬಿ.ಆರ್ ಅಂಬೇಡ್ಕರ್ರಂತಹ ಮಹಾನುಭಾವರ ಕನಸಿನ ನಾಡನ್ನು ಉಳಿಸಿಕೊಂಡು ಹೋಗಬೇಕಿದೆ. ಆ ದಿಸೆಯಲ್ಲಿ ಕುವೆಂಪು ಅವರ ಜನ್ಮದಿನವಾದ ಇಂದು ನಮ್ಮ ಸಂವಿಧಾನದ ಆಶಯವನ್ನು ಉಳಿಸಿಕೊಳ್ಳುವ ಪಣದೊಂದಿಗೆ ಅದರ ಪ್ರಸ್ತಾವನೆ ವಾಚನ ಮತ್ತು ಸರ್ವಧರ್ಮ ಸಹಭೋಜನ ಬಹಳ ಅರ್ಥಪೂರ್ಣ ಎಂದು ಹೇಳಿದರು.
ಮುಸ್ಲಿಂ ಧರ್ಮಗುರು ಜಾಮಿಯಾ ಮಸೀದಿಯ ಅಖಿಲ್ ರಝಾ ಮಾತನಾಡಿ, ಎಲ್ಲರೂ ದೇಶದ ಸಮಗ್ರತೆ ಮತ್ತು ಏಕತೆಗೆ ಪಣತೊಟ್ಟು ಪರಸ್ಪರ ಸಹೋದರತೆಯಿಂದ ದುಡಿಯುವುದೇ ದೇಶದ ಏಳಿಗೆಯ ಗುಟ್ಟು.ನಾವೆಲ್ಲಾ ನಮ್ಮ ತಾಯ್ನೆಲದ ಒಳಿತಿಗೆ ಒಗ್ಗಟ್ಟಿನ ಮಂತ್ರ ಪಠಿಸೋಣ. ಒಡೆಯುವ ಶಕ್ತಿಗಳ ವಿರುದ್ಧ ಏಕತೆಯ ದನಿ ಮೊಳಗಿಸೋಣ ಎಂದರು.
ಕ್ರೈಸ್ತ ಧರ್ಮಗುರು ಫಾದರ್ ವೀರೇಶ್ ಅವರು, ಸರ್ವಜನಾಂಗದ ಶಾಂತಿಯ ತೋಟವನ್ನು ಹಾಗೆಯೇ ಉಳಿಸಿಕೊಂಡು ಹೋಗುವ ಸವಾಲು ನಮ್ಮ ಮುಂದಿದೆ. ಆ ಹಿನ್ನೆಲೆಯಲ್ಲಿ ನಮಗೆ ಇಂದು ಸಂವಿಧಾನ ಮತ್ತು ಅದರ ಆಶಯಗಳನ್ನು ಸಾರಿದ ಕುವೆಂಪು ಅವರಂಥ ಮೇಧಾವಿಗಳ ಸಹಬಾಳ್ವೆಯ ಸಂದೇಶಗಳು ಅಸ್ತ್ರವಾಗಬೇಕು ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಜಮಾತೆ ಇಸ್ಲಾಂ ಸಂಘಟನೆ ಅಬ್ದುಲ್ ವಹಾಬ್, ಹಿರಿಯ ವಕೀಲ ಶೆಹ್ರಾಜ್, ಶಿವಮೊಗ್ಗ ಪ್ರೆಸ್ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ದಸಂಸ ನಾಯಕ ಗುರುಮೂರ್ತಿ, ಲೇಖಕಿ ಅಕ್ಷತಾ ಹುಂಚದಕಟ್ಟೆ, ಪತ್ರಕರ್ತ ಶಶಿ ಸಂಪಳ್ಳಿ, ಮಲ್ಲಿಕಾರ್ಜುನ ಹೊಸಪಾಳ್ಯ, ಟಿ.ಎಲ್ ರೇಖಾಂಬ, ಮಂಜುಳಾ ರಾಜು, ಪ್ರಕಾಶ್ ಮರ್ಗನಹಳ್ಳಿ, ಭಾಸ್ಕರ್, ಮಾಲತೇಶ್ ಬೊಮ್ಮನ ಕಟ್ಟೆ, ಕಿರಣ್, ಹುಸೇನ್, ಸಮುದಾಯದ ಪ್ರಭಾಕರನ್ ಕೃಷ್ಣನ್ ಮತ್ತಿತರರು ಭಾಗವಹಿಸಿದ್ದರು.