ಶಿವಮೊಗ್ಗ: ಬರ್ತ್ಡೇ ಪಾರ್ಟಿ ಮಾಡುತ್ತಿದ್ದ ಗೆಳೆಯರನ್ನು ಬೆದರಿಸಿ, ಹಲ್ಲೆ ನಡೆಸಿ ಹಣ ದೋಚಿಕೊಂಡು ಹೋಗಿದ್ದ ಆರೋಪಿಗಳಲ್ಲಿ ಆರು ಮಂದಿಯನ್ನು ಕುಂಸಿ ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಆರು ಮಂದಿ ಪರಾರಿಯಾಗಿದ್ದು, ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ,
ಶಿವಮೊಗ್ಗ ಟ್ಯಾಂಕ್ ಮೊಹಲ್ಲದ ಶಫೀವುಲ್ಲಾ ಅಲಿಯಾಸ್ ಟ್ಯಾಂಕ್ ಮೊಹಲ್ಲ ಶಫಿ(35) , ಶೇಷಾದ್ರಿಪುರಂನ ಮಾರುತಿ ಅಲಿಯಾಸ್ ಕ್ಯಾಂಡಿ (28), ಮೆಹದಿ ನಗರದ ಆವೇಜ್ ಅಲಿ(22), ಬಸವನಗುಡಿಯ ಹೊನ್ನೇಶ್ ಅಲಿಯಾಸ್ ಚಿನ್ನು(24), ಗಣೇಶ್(22), ವಿನೋದ(19) ಬಂಧಿತ ಆರೋಪಿಗಳು. ಇವರಿಂದ 830 ರೂ. ಹಣ, 5 ಮೊಬೈಲ್ ಫೋನ್ ಮತ್ತು ಸ್ಕೂಟಿಯನ್ನು ವಶಪಡಿಸಿಕೊಳ್ಳಲಾಗಿದೆ.
ನವೆಂಬರ್ 13ರಂದು ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ವೀರಣ್ಣ ಬೆನವಳಿ ಗ್ರಾಮದ ಬಳಿ ಇರುವ ಕಿರು ಅರಣ್ಯ ಪ್ರದೇಶದಲ್ಲಿ ಯತೀಶ್ ಹಾಗೂ ಆತನ ಸ್ನೇಹಿತರು ಬರ್ತ್ಡೇ ಪಾರ್ಟಿ ಮಾಡುತ್ತಿದ್ದರು. ಈ ವೇಳೆ, 12 ಜನರ ತಂಡ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದಿದ್ದು, ಸ್ನೇಹಿತರನ್ನು ಬೆದರಿಸಿ, ಹಲ್ಲೆ ನಡೆಸಿ ಹಣವನ್ನು ದೋಚಿಕೊಂಡು ಹೋಗಿದ್ದರು.