ಶಿವಮೊಗ್ಗ: ಈಗಾಗಲೇ ಹಿಂದೂಗಳು ಅಯೋಧ್ಯೆಯನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಈಗ ಕಾಶಿಯನ್ನು ವಶಕ್ಕೆ ಪಡೆದಿದ್ದು, ನಾಳೆ ಮಥುರಾವನ್ನು ವಶಕ್ಕೆ ಪಡೆಯುತ್ತೇವೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಯೋಧ್ಯೆ, ಕಾಶಿ ಹಾಗೂ ಮಥುರಾ ಹಿಂದೂಗಳ ಪವಿತ್ರ ಕ್ಷೇತ್ರಗಳು. ಇಲ್ಲಿ ಮುಸ್ಲಿಂರು ತಮ್ಮ ಮಸೀದಿ ನಿರ್ಮಾಣ ಮಾಡಿಕೊಂಡಿದ್ದಾರೆ ಅಷ್ಟೇ ಎಂದು ಆರೋಪಿಸಿದರು.
ಕಾಶಿಯ ಜ್ಞಾನವಾಪಿಯಲ್ಲಿನ ಮಸೀದಿಯ ಬಾವಿಯಲ್ಲಿ 12 ಅಡಿ ಎತ್ತರದ ಶಿವಲಿಂಗ ಪತ್ತೆಯಾಗಿದೆ. ಇದು ಹಿಂದೂಗಳಿಗೆ ಶುಭ ಸುದ್ದಿಯಾಗಿದೆ. ಜ್ಞಾನವಾಪಿಯಲ್ಲಿ ಇರುವುದು ಮಸೀದಿ ಅಲ್ಲ, ಅದು ಶಿವನ ದೇವಾಲಯ ಅಂತ ಸರ್ವೆಯಿಂದ ತಿಳಿದುಬಂದಿದೆ. ಇಲ್ಲಿನ ದೇವಾಲಯವನ್ನು 350 ವರ್ಷಗಳ ಹಿಂದೆ ಔರಂಗಜೇಬ್ ದ್ವಂಸ ಮಾಡಿ ಮಸೀದಿ ನಿರ್ಮಾಣ ಮಾಡಿದ್ದರು. ನಂತರ 110 ವರ್ಷಗಳ ಹಿಂದೆ ಅಹಲ್ಯ ಬಾಯಿ ಅವರು ಶಿವನ ದೇವಾಲಯವನ್ನು ಪುನಃ ನಿರ್ಮಾಣ ಮಾಡಿದ್ದರು. ಇದರಿಂದ ಭಾರತೀಯರಾದ ನಾವೆಲ್ಲಾ ಔರಂಗಜೇಬನ ವಂಶಸ್ಥರಾಗದೆ, ಅಹಲ್ಯ ಬಾಯಿ ಅವರ ವಂಶಸ್ಥರಾಗಬೇಕೆಂದು ವಿನಂತಿಸಿಕೊಂಡರು.
ಜ್ಞಾನವಾಪಿಯಲ್ಲಿ ಶಿವನ ಲಿಂಗ ಪತ್ತೆಯಾದ್ರೆ, ಇತ್ತ ದೇಶದ್ರೋಹಿ ಎಐಎಂಐಎಂ ಸಂಸದ ಓವೈಸಿಯಂತಹವರು ಮಹಾರಾಷ್ಟ್ರದ ಔರಂಗಜೇಬನ ಸಮಾಧಿಗೆ ಚಾದರ್ ಹೊದಿಸಿ ಪೂಜೆ ಸಲ್ಲಿಸುತ್ತಾರೆ ಅಂದ್ರೆ ಇವರಿಗೆ ದೇಶದ್ರೋಹಿ ಅನ್ನದೆ ಇನ್ನೇನು ಕರೆಯಬೇಕು ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ನ ಕೆಲ ರಾಷ್ಟ್ರದ್ರೋಹಿಗಳು ಈಗಾಲಾದ್ರೂ ಬುದ್ಧಿ ಕಲಿಯಬೇಕು, ನಮ್ಮ ತೀರ್ಥಕ್ಷೇತ್ರಗಳ ಸುದ್ದಿಗೆ ನೀವು ಬರಬೇಡಿ ಎಂದು ಕಾಂಗ್ರೆಸ್ ನವರು ಈಗಲೂ ಹೇಳುತ್ತಿಲ್ಲ. ರಾಷ್ರದ್ರೋಹಿಗಳಿಗೆ ನಮ್ಮಲ್ಲಿ ಅವಕಾಶವಿಲ್ಲ. ಆದರೆ, ಶಾಂತಿಯುತವಾಗಿರುವುದು ಹಿಂದೂಗಳ ದೌರ್ಬಲ್ಯವಲ್ಲ ಎಂದರು.
ಸರ್ಕಾರಕ್ಕೆ ಮತ್ತೆ ಸೇರ್ತೇನೆ: ಸಚಿವ ಸ್ಥಾನಕ್ಕೆ ಮತ್ತೆ ಸೇರ್ಪಡೆಯಾಗುತ್ತಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದೇನು ಮಹಾ ದೊಡ್ಡದು, ಇಂದಲ್ಲಾ ನಾಳೆ ಬರ್ತೇನೆ ಬಿಡಪ್ಪ, ಅದಕ್ಕಿಂತ ದೊಡ್ಡದು ಹಿಂದೂಗಳ ಪವಿತ್ರ ಕ್ಷೇತ್ರ ವಾಪಸ್ ದೂರಕುತ್ತಿರುವುದು ಎಂದು ಈಶ್ವರಪ್ಪ ಹೇಳಿದರು.
ಕೊಡಗಿನಲ್ಲಿ ಶಿಬಿರ ಕುರಿತು ಪ್ರತಿಕ್ರಿಯಿಸಿ, ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿಯೇ ಉತ್ತರಿಸಿದ್ದಾರೆ. ಅಲ್ಲಿ ಯಾವುದೇ ಆಯುಧ ವಿತರಣೆ ಮಾಡಿಲ್ಲ, ರಬ್ಬರ್ ಬುಲೆಟ್ ನಲ್ಲಿ ಬಂದೂಕು ತರಬೇತಿ ನೀಡಲಾಗಿದೆ. ನಮ್ಮ ರಕ್ಷಣೆಗೆ ನಾವು ತರಬೇತಿ ನೀಡಬಾರದೆ ಎಂದು ಈಶ್ವರಪ್ಪ ಪ್ರಶ್ನಿಸಿದರು.
ಇದನ್ನೂ ಓದಿ: ಬಂದೂಕು ತರಬೇತಿ ಸಮರ್ಥಿಸಿಕೊಂಡ ಕೆ ಜಿ ಬೋಪಯ್ಯ