ಶಿವಮೊಗ್ಗ: ಕಾಂಗ್ರೆಸ್ ನಡೆಸುತ್ತಿರುವ ಪೇ ಸಿಎಂ ಕೀಳುಮಟ್ಟದ ಅಭಿಯಾನ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಕಾಂಗ್ರೆಸ್ ಪಕ್ಷ ಮತ್ತು ನಾಯಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ಪಕ್ಷದ ಸಿಎಂ ಇರಲಿ, ಕೀಳುಮಟ್ಟಕ್ಕೆ ಇಳಿಯಬಾರದು. ಕಾಂಗ್ರೆಸ್ ಮುಖಂಡರೇ ಇದರ ವಿರುದ್ಧ ದ್ವನಿ ಎತ್ತಬೇಕಿತ್ತು. ಪೇ ಸಿಎಂ ಪೋಸ್ಟರ್ ಅಂಟಿಸಿದವರಿಗಿಂತಲೂ ಕಾಂಗ್ರೆಸ್ ಮುಖಂಡರು ಕೀಳು ಮಟ್ಟದವರು ಎಂದು ಕಿಡಿಕಾರಿದರು. ಇಷ್ಟು ಕೀಳುಮಟ್ಟದ ರಾಜಕಾರಣಕ್ಕೆ ಕಾಂಗ್ರೆಸ್ ಇಳಿಯುತ್ತದೆ ಎಂದು ಅಂದುಕೊಂಡಿರಲಿಲ್ಲ. ಒಬ್ಬ ಸಿಎಂ ಬಗ್ಗೆ ಪೆಸಿಎಂ ಎಂಬ ಅಭಿಯಾನ ಮಾಡುವ ಮೂಲಕ ನೀಚ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ಸಿಗರು ರಾಜಕಾರಣ ಮಾಡಲು ಯೋಗ್ಯರಲ್ಲ. ಪೇಸಿಎಂ ಪೋಸ್ಟರ್ ಹಂಚುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಕಾಂಗ್ರೆಸ್ಸಿಗರು ಹೇಳಬೇಕಿತ್ತು.
ಆದರೇ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ಪೆಸಿಎಂ ಪೋಸ್ಟರ್ ಹಂಚುವ ಮೂಲಕ ಯುವ ಕಾಂಗ್ರೆಸ್ಗಿಂತಲೂ ಕೀಳು ಮಟ್ಟಕ್ಕೆ ಇಳಿಯುವ ಮೂಲಕ ಮುಖ್ಯಮಂತ್ರಿ ಪದವಿಗೆ ಕಾಂಗ್ರೆಸ್ಸಿಗರು ಅಪಮಾನ ಮಾಡುತ್ತಿದ್ದಾರೆ. ಕಾಂಗ್ರೆಸ್ ಪರವಾದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಲ್ಲರಿಗೂ ದೂರು ನೀಡಿದರು. ಆದರೆ ಎಲ್ಲಿಯೂ ಸಾಬೀತಾಗಿಲ್ಲ. ನಮ್ಮ ವಿರುದ್ಧ ಭ್ರಷ್ಟಾಚಾರದ ಒಂದೇ ಒಂದು ದಾಖಲೆ ಈತನಕ ಬಿಡುಗಡೆಯಾಗಿಲ್ಲ. ಸಿಎಂ ಪದವಿಗೆ ಕಾಂಗ್ರೆಸ್ ಅವಮಾನ ಮಾಡುತ್ತಿದೆ. 40 ಪರ್ಸೆಂಟ್ ಕಮಿಷನ್ ಬಗ್ಗೆ ಒಂದು ದಿನವೂ ವಿಧಾನಸಭೆಯಲ್ಲಿ ಪ್ರಸ್ತಾಪ ಇಲ್ಲ. ಹಾಗಾಗಿ ಕಾಂಗ್ರೆಸ್ ಬುಡುಬುಡಿಕೆ ಆಟವನ್ನು ಜನ ನಂಬೋದಿಲ್ಲ ಎಂದರು.
ವಿಧಾಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಡಿಕೆಶಿ ತಯಾರಿಸುತ್ತಾರೆ: ವಿಧಾಸಭಾ ಅಭ್ಯರ್ಥಿಗಳ ಪಟ್ಟಿಯನ್ನು ನಾನೇ ತಯಾರಿಸುತ್ತೇನೆ. ಅದನ್ನು ಸಿದ್ದರಾಮಯ್ಯ ಅವರಿಗೂ ತೋರಿಸುವುದಿಲ್ಲ. ನೇರವಾಗಿ ಸೋನಿಯಾಗಾಂಧಿಗೆ ಕಳುಹಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಾರೆ. ಸರ್ವಾಧಿಕಾರಿ ಧೋರಣೆ ಡಿ.ಕೆ.ಶಿವಕುಮಾರ್ ಮಾಡುತ್ತಿದ್ದಾರೆ. ಇದನ್ನು ಅವರ ಪಕ್ಷದ ಇನ್ನೊಂದು ಗುಂಪಿನವರೇ ವಿರೋಧಿಸುತಿದ್ದು, ಆರ್.ವಿ.ದೇಶಪಾಂಡೆ, ದಿನೇಶ್ ಗುಂಡೂರಾವ್ ಅವರೇ ಈ ರೀತಿಯ ಸರ್ವಾಧಿಕಾರಿ ಧೋರಣೆ ಸರಿಯಲ್ಲ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ವಿಭಜನೆಗೆ ಸಿದ್ದರಾಮೋತ್ಸವ ಕಾರಣವಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ಸಿಗರು ಬುಡುಬುಡುಕೆ ಆಟ ನಿಲ್ಲಿಸಬೇಕು. ಖಾಲಿ ಡಬ್ಬ ಅಲ್ಲಾಡಿಸಿ ಶಬ್ಧ ಮಾಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಅದನ್ನು ಬಿಟ್ಟು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅಥವಾ ಅವರ ಬಾಸ್ ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರು ದಾಖಲೆ ಬಿಡುಗಡೆ ಮಾಡಲಿ. ಅದನ್ನು ಬಿಟ್ಟು 40 ಪರ್ಸೆಂಟ್ ಎಂದು ಹೇಳಿಕೊಂಡು ಬರುವುದು ಸರಿಯಲ್ಲ. ವಿಧಾನ ಮಂಡಲದ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತಬೇಕಿತ್ತು ಎಂದು ಪ್ರಶ್ನಿಸಿದರು.
ಇನ್ನು, ಶಿವಮೊಗ್ಗದಲ್ಲಿ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಶಂಕಿತ ಉಗ್ರರ ಬಂಧನ ವಿಷಯ ಕುರಿತು ಪ್ರತಿಕ್ರಿಯಿಸಿ, ರಾಷ್ಟ್ರ ಭಕ್ತ ಮುಸಲ್ಮಾನರು ಯುವಕರನ್ನು ನಿಯಂತ್ರಣದಲ್ಲಿಡ ಬೇಕು. ಇಲ್ಲದಿದ್ದಲ್ಲಿ ಅವರು ಕೊಲೆ ಮಾಡಲು ಹೋಗಿ ಜೈಲು ಸೇರುತ್ತಾರೆ ಅಥವಾ ಭಯೋತ್ಪಾದಕ ಸಂಘಟನೆ ಜೊತೆ ಸೇರಿ ಜೈಲು ಸೇರುತ್ತಾರೆ. ಈ ಬಗ್ಗೆ ಮುಸ್ಲಿಂ ಸಮುದಾಯದ ಹಿರಿಯರು ಎಚ್ಚರಿಕೆ ವಹಿಸಬೇಕು ಎಂದರು.
ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಮುಂದುವರಿದ ಕಾಂಗ್ರೆಸ್ನ 'ಪೇ ಸಿಎಂ' ಅಭಿಯಾನ