ಶಿವಮೊಗ್ಗ: ಎಸ್ಟಿ ಪಂಗಡಕ್ಕೆ ಸೇರಲು ಅರ್ಹತೆ ಇರುವ ಸಮಾಜದವರಿಗೆ ನಾನು ಬೆಂಬಲ ನೀಡುತ್ತೇನೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಎಸ್ಟಿ ಸೇರುವ ಕುರಿತು ಮಾತನಾಡಿದ ಅವರು, ಸಮಾಜದಲ್ಲಿ ಹಿಂದುಳಿದ ಕುರುಬ, ಸವಿತಾ ಸಮಾಜ, ಗುಲ್ಬರ್ಗ ಭಾಗದ ಕೋಲಿ ಹಾಗೂ ಕಾಡು ಗೊಲ್ಲರು ಎಸ್ಟಿಗೆ ಸೇರಲು ಸಿದ್ಧರಿದ್ದಾರೆ. ಕೋಲಿ ಸಮಾಜದ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರು ಎಸ್ಟಿಗೆ ಸೇರಲು ಸಿದ್ಧರಿದ್ದಾರೆ. ಅವರೆಲ್ಲ ಭಾನುವಾರ ನಮ್ಮ ಮನೆಗೆ ಬರಲಿದ್ದಾರೆ. ಅದೇ ರೀತಿ ಕುರುಬ ಸಮಾಜದ ಸ್ವಾಮೀಜಿಗಳಾದ ನಿರಂಜನಾನಂದ ಪುರಿ ಸ್ವಾಮೀಜಿ, ಹೊಸದುರ್ಗದ ಸ್ವಾಮೀಜಿ ನಮ್ಮ ಮನೆಗೆ ಬಂದು ಕುರುಬ ಸಮಾಜ ಎಸ್ಟಿಗೆ ಸೇರಲು ನಿಮ್ಮ ಮುಂದಾಳತ್ವ ಬೇಕು ಎಂದು ಕೇಳಿ ಕೊಂಡಿದ್ದಾರೆ. ಅದೇ ರೀತಿ ಸಭೆಯನ್ನು ಸಹ ನಡೆಸಿದ್ದಾರೆ ಎಂದರು.
ಈ ಸಭೆಗೆ ಮಾಜಿ ಸಚಿವ ವಿಶ್ವನಾಥ್, ಬಂಡೆಪ್ಪ ಕಾಶೆಂಪೂರ್ ಸೇರಿ ಸಮಾಜದ ಮುಖಂಡರು ಆಗಮಿಸಿದ್ದರು. ಇವರೆಲ್ಲ ಸೇರಿ ಒಂದು ಸಮಿತಿ ರಚನೆ ಮಾಡಿ ಕೊಂಡು ಹೋರಾಟದ ಚಿಂತನೆ ನಡೆಸುತ್ತಿದ್ದಾರೆ. ಈಗ ಸುಪ್ರೀಂಕೋರ್ಟ್ ಆದೇಶದಂತೆ ಮೀಸಲಾತಿ ಶೇ .50 ಮೀರುವಂತಿಲ್ಲ ಎಂದು ಹೇಳಿದೆ. ಈಗ ವಾಲ್ಮೀಕಿ ಸಮಾಜದವರು ಶೇ 3 ಮೀಸಲಾತಿಯಲ್ಲಿದ್ದಾರೆ. ಅವರು ಶೇ .7 ರಷ್ಟು ನೀಡಿ ಎಂಬ ನ್ಯಾಯಯುತವಾದ ಬೇಡಿಕೆ ಇಟ್ಟಿದ್ದಾರೆ.
ಈಗ ನಾಗಮೋಹನದಾಸ್ ಸಮಿತಿ ವರದಿ ನೀಡಿದ ಬಳಿಕ ಸರ್ಕಾರ ಎಷ್ಟು ಮೀಸಲಾತಿ ನೀಡಬಹುದು ಎಂದು ಚಿಂತನೆ ನಡೆಸಲಿದೆ. ಈಗ ಓಬಿಸಿಯಲ್ಲಿ ಎಷ್ಟು ಪ್ರಮಾಣದಲ್ಲಿ ಮೀಸಲಾತಿ ಇದೆಯೋ ಹಾಗೇಯೇ ಎಸ್ಟಿಗೆ ಸಹಾ ಮೀಸಲಾತಿ ಸಿಗಲಿದೆ ಎಂದರು.