ಶಿವಮೊಗ್ಗ: ಹಿಂದೆ ಕಾಂಗ್ರೆಸ್ ಪಕ್ಷ ಬಿಟ್ಟು ಹೋದವರನ್ನು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಈಗ ಚುನಾವಣೆ ಬಂತು ಎಂದು ಪಕ್ಷ ಬಿಟ್ಟು ಹೋದವರನ್ನು ಅಹ್ವಾನಿಸುತ್ತಿರುವುದು, ಕಾಂಗ್ರೆಸ್ ಪಕ್ಷ ಬೆತ್ತಲಾಗಿದೆ ಎಂಬುದಕ್ಕೆ ಸಾಕ್ಷಿ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಪಕ್ಷಕ್ಕೆ ಎರಡು ಲಕ್ಷ ರೂಪಾಯಿ ಠೇವಣಿ ಇಡಬೇಕೆಂದು ಹೇಳಿರುವುದು ಪ್ರಾಮಾಣಿಕ ಕಾರ್ಯಕರ್ತರಿಗೆ ಮಾಡಿದ ಅಪಮಾನವಾಗಿದೆ. ನಿಷ್ಠಾವಂತ ಕಾಂಗ್ರೆಸ್ಸಿಗ ಎರಡು ಲಕ್ಷ ರೂಪಾಯಿಯನ್ನು ಎಲ್ಲಿಂದ ತರುತ್ತಾನೆ. ಬಡವರು ಚುನಾವಣೆಗೆ ನಿಲ್ಲುವುದು ಬೇಡ ಎಂದು ಕಾಂಗ್ರೆಸ್ ನೇರವಾಗಿ ಹೇಳಲಿ. ಇದರಿಂದ ಕಾಂಗ್ರೆಸ್ ಅಧ್ಯಕ್ಷರು ಪಕ್ಷದ ಕಾರ್ಯಕರ್ತರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಓರ್ವ ಅಲೆಮಾರಿ ರಾಜಕಾರಣಿ : ಸಿದ್ದರಾಮಯ್ಯನವರು ಚುನಾವಣೆಗೆ ಸ್ಪರ್ಧಿಸಲು ಕ್ಷೇತ್ರ ಹುಡುಕುತ್ತಿದ್ದಾರೆ. ಹಿಂದೆ ವರುಣ, ನಂತರ ಬಾದಾಮಿ ಈಗ ಚಾಮರಾಜಪೇಟೆ, ಕೋಲಾರ ಹೀಗೆ ಹೇಳ್ತಾ ಇದ್ದಾರೆ. ಅಲೆಮಾರಿ ಎಲ್ಲಿ ನಿಂತರೂ ಸೋಲುತ್ತಾರೆ. ಸಿದ್ದರಾಮಯ್ಯನವರು ಪರಮೇಶ್ವರನ್ನು ಸೋಲಿಸಿದರು. ಖರ್ಗೆಯವರನ್ನು ಸಿಎಂ ಆಗಲು ಬಿಡಲಿಲ್ಲ. ಈಗ ಡಿ.ಕೆ. ಶಿವಕುಮಾರ್ ಅಡ್ಡಗಾಲು ಹಾಕುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ನಿಲ್ಲಲು ಕ್ಷೇತ್ರವಿಲ್ಲ. ಪರಿಸ್ಥಿತಿ ಹೀಗಿರುವಾಗ 150 ಸ್ಥಾನ ಎಲ್ಲಿಂದ ಗೆಲ್ಲುವುದು. ಸಿದ್ದರಾಮಯ್ಯ ಎಲ್ಲಿ ನಿಂತರೂ ಸೋಲುತ್ತಾರೆ ಎಂದು ಹೇಳಿದರು.
ಖರ್ಗೆಯವರು ಸಿದ್ದು ಹಾಗೂ ಡಿಕೆಶಿಯನ್ನು ಸುಮ್ಮನೆ ಬಿಡಲ್ಲ: ತಮ್ಮನ್ನು ಸೋಲಿಸಿದ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರನ್ನು ಖರ್ಗೆ ಸುಮ್ಮನೆ ಬಿಡಲ್ಲ. ಯಾಕೆಂದರೆ ಹಿಂದೆ ಚುನಾವಣೆಯಲ್ಲಿ ಸೋಲಿಸಿದವರನ್ನು ಯಾರಾದರೂ ಸುಮ್ಮನೆ ಬಿಡುತ್ತಾರೆಯೇ ಎಂದು ಪ್ರಶ್ನಿಸಿದರು. ಖರ್ಗೆ ಹಿರಿಯ ರಾಜಕಾರಣಿ, ಅವರನ್ನು ಸೋಲಿಸಿ, ಸಿಎಂ ಸ್ಥಾನವನ್ನು ತಪ್ಪಿಸಿದ್ದೇ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರು. ಈಗ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ ಎಂದು ಏರ್ಪೋರ್ಟ್ ಗೆ ಹೋಗಿ ಸ್ವಾಗತ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಇನ್ನು, ದತ್ತ ಪೀಠದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಅದರಂತೆ ಸರ್ಕಾರ ನಡೆದುಕೊಳ್ಳುತ್ತಿದೆ. ಬರುವಂತಹ ದಿನಗಳಲ್ಲಿ ದತ್ತಪೀಠ ಹಿಂದು ಪೀಠ ಆಗುವ ವಿಶ್ವಾಸವಿದೆ ಎಂದು ಈಶ್ವರಪ್ಪ ಹೇಳಿದ್ರು.
ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ : ಮುಂಬರುವ 2023 ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸವನ್ನು ಈಶ್ವರಪ್ಪ ವ್ಯಕ್ತಪಡಿಸಿದರು. ಕಾಂಗ್ರೆಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲ್ಲ ಎಂದರು. ಕಾಂಗ್ರೆಸ್ ಜಾತಿ, ಗೂಂಡಾಗಿರಿ ಹಣದ ಮೇಲೆ ಚುನಾವಣೆ ಮಾಡಿ ಅಭ್ಯಾಸ ಎಂದು ಕಿಡಿಕಾರಿದರು.
ಇದನ್ನೂ ಓದಿ : ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ: ಪಾಲಿಕೆಯಿಂದಲೇ ಸೂಕ್ತ ನಿರ್ಧಾರ ಎಂದ ಶೆಟ್ಟರ್