ಶಿವಮೊಗ್ಗ: ಇನ್ನೂ ನಾಲ್ಕು ವರ್ಷಗಳ ಕಾಲ ಪ್ರಧಾನಿಯಾಗಿ ನರೇಂದ್ರ ಮೋದಿ ಮುಂದುವರಿದರೆ ದೇಶದ ಕನಿಷ್ಠ 10 ಕೋಟಿ ಜನ ಬಡತನ, ಹಸಿವು ತಾಳಲಾಗದೇ ಬದುಕಲು ಆಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಆತಂಕ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ದಿನೆ ದಿನೇ ಪೆಟ್ರೋಲ್, ಡೀಸೆಲ್, ಸಿಲಿಂಡರ್ ದರ ಹೆಚ್ಚಳವಾಗುತ್ತಿದೆ. ಕಾಂಗ್ರೆಸ್ನವರು ಬಡವರ ಬಗ್ಗೆ ಮಾತನಾಡಿದರೆ ಬಿಜೆಪಿಯವರು ಶ್ರೀರಾಮನ ಬಗ್ಗೆ ಹೇಳುತ್ತಾರೆ. ಒಂದೊಂದು ಅಸೆಂಬ್ಲಿ ಗೆಲ್ಲಲು ಐದರಿಂದ ಹತ್ತು ಕೋಟಿ ರೂ. ಖರ್ಚು ಮಾಡುವ ಬಿಜೆಪಿಯವರಿಗೆ ಎಲ್ಲಿಂದ ಹಣ ಬಂತು ಎಂದು ಪ್ರಶ್ನಿಸಿದರು.
ಹಿಂದೆ ನಾನು ಬಿಜೆಪಿಯ ಧರ್ಮ, ರಾಷ್ಟ್ರಪ್ರೇಮ ಕಂಡು ಅವರಿಗೆ ಅಧಿಕಾರ ಸಿಗಬೇಕು ಎಂದಿದ್ದೆ. ಆದರೆ ಇವರಿಗೆ ಅಧಿಕಾರ ಸಿಕ್ಕಾಗ ಆಗಿರುವ ಅವಾಂತರವನ್ನು ಗಮನಿಸಿದರೆ ನಿಜಕ್ಕೂ ಇನ್ನೂ ಕಷ್ಟದ ದಿನಗಳು ಇದೆ ಅನಿಸುತ್ತಿದೆ. ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಪೆಟ್ರೋಲ್, ಸಿಲಿಂಡರ್ ದರ ಒಂದೆರಡು ರೂಪಾಯಿ ಹೆಚ್ಚಳ ಆದ ಸಂದರ್ಭದಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದ ಬಿಜೆಪಿಯ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಸ್ಮೃತಿ ಇರಾನಿ ಈಗ ಎಲ್ಲಿ ಹೋದರು ಎಂದು ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ: ಪಕ್ಷ ಬಯಸಿದ್ರೆ ಗೋಕಾಕ್ನಿಂದಲೇ ಸ್ಪರ್ಧೆ ಖಚಿತ: ಸಚಿವ ಜಾರಕಿಹೊಳಿಗೆ ಲಕ್ಷ್ಮಿ ಸವಾಲು
ನಂತರ ಮೀಸಲಾತಿ ಕುರಿತು ಮಾತನಾಡಿದ ಅವರು, ಮೀಸಲಾತಿ ವಿಷಯಕ್ಕೆ ಸಂಬಂಧಪಟ್ಟಂತೆ ಹೋರಾಟ ನಡೆಸುತ್ತಿರುವ ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಟ್ಟು ಪ್ರತಿಭಟನೆ ಮಾಡಲಿ ಹಾಗೂ ತಮ್ಮದೇ ಸರ್ಕಾರದ ವಿರುದ್ಧ ಹೋರಾಟವೋ ಅಥವಾ ಯಾರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ ಎಂಬುದನ್ನು ರಾಜ್ಯದ ಜನರಿಗೆ ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.
ಮಧು ಬಂಗಾರಪ್ಪ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಮಧು ಬಂಗಾರಪ್ಪ ಕಾಂಗ್ರೆಸ್ಗೆ ಬಂದರೆ ಸ್ವಾಗತ. ಆದರೆ, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ್ ಗೌಡ ಕಾಂಗ್ರೆಸ್ ಸೇರ್ಪಡೆಗೆ ನನ್ನ ವಿರೋಧವಿದೆ ಎಂದರು.