ಶಿವಮೊಗ್ಗ: ಭದ್ರಾವತಿಯಲ್ಲಿನ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಹಾಗೂ ಮೈಸೂರು ಪೇಪರ್ ಮಿಲ್ಗಳನ್ನು ರಾಜ್ಯ ಸರ್ಕಾರ ಇಚ್ಛಾಶಕ್ತಿ ತೆಗೆದುಕೊಂಡು ಪುನಾರಂಭಿಸಲು ಮನಸ್ಸು ಮಾಡಬೇಕಿದೆ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ರಾಜ್ಯಾಧ್ಯಕ್ಷ ಕೆ ಬಿ ಅರಸಪ್ಪ ಆಗ್ರಹಿಸಿದ್ದಾರೆ. ಭದ್ರಾವತಿಯ ವಿಐಎಸ್ಎಲ್ ಹಾಗೂ ಎಂಪಿಎಂ ಕಾರ್ಖಾನೆಗಳ ಪ್ರಾರಂಭಕ್ಕೆ ಪೂರಕ ಮೂಲಸೌಕರ್ಯ ಸೇರಿ ಎಲ್ಲವೂ ಅಸ್ತಿತ್ವದಲ್ಲಿದೆ. ಈ ಎರಡು ಕಾರ್ಖಾನೆಗಳು ಪ್ರಾರಂಭಗೊಳ್ಳುವುದರಿಂದ ಜಿಲ್ಲೆಯಲ್ಲಿನ 15 ಸಾವಿರ ಜನತೆಗೆ ಉದ್ಯೋಗ ಸಿಗಲಿದೆ ಎಂದರು.
ರಾಜ್ಯಾದೆಲ್ಲಡೆ ಕೆಎಸ್ಐಡಿಸಿ ಪ್ರಾರಂಭಿಸಲು ಆಗ್ರಹ : ರಾಜ್ಯಾದ್ಯಂತ ಕೈಗಾರಿಕಾ ವಸಾಹತು ಪ್ರದೇಶಗಳನ್ನು ಸ್ಥಾಪಿಸುವ ಕುರಿತು ಸರ್ಕಾರ ಚಿಂತಿಸಬೇಕಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಸಹ ಕೈಗಾರಿಕಾ ವಸಾಹತು ಪ್ರದೇಶ ಸ್ಥಾಪನೆ ಮಾಡುವ ಅವಶ್ಯಕತೆಯಿದೆ. ಶಿವಮೊಗ್ಗ ಹಾಗೂ ಸಾಗರ ತಾಲೂಕಿನಲ್ಲಿ ಈಗಾಗಲೇ ಕೈಗಾರಿಕಾ ವಸಾಹತು ಪ್ರದೇಶಗಳಿವೆ. ಆದರೆ, ಬಹುದಿನಗಳ ಬೇಡಿಕೆಯಾಗಿರುವ ತೀರ್ಥಹಳ್ಳಿ ಕೈಗಾರಿಕಾ ವಸಾಹತು ಪ್ರದೇಶಕ್ಕೆ ಸರ್ಕಾರ ಅಸ್ತು ಎನ್ನುವ ಮೂಲಕ ಕೈಗಾರಿಕಾ ಸ್ಥಾಪನೆಗೆ ಗಮನ ಹರಿಸಬೇಕಿದೆ ಎಂದರು.
ರಾಜ್ಯ ಸರ್ಕಾರ ಎಂಎಸ್ಎಂಇ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ. ಕೈಗಾರಿಕಾ ಪ್ರದೇಶಗಳ ಮೂಲಸೌಕರ್ಯ ವೃದ್ಧಿಯತ್ತ ಗಮನ ಹರಿಸಬೇಕಿದೆ. ಈ ನಿಟ್ಟಿನಲ್ಲಿ ಕಾಸಿಯಾ ಜಿಲ್ಲಾ ಸಂಘಗಳು ಬೆಂಬಲ ಸೂಚಿಸುತ್ತವೆ ಎಂದರು. ಈ ವೇಳೆ ಕಾಸಿಯಾದ ಜಗದೀಶ್, ಪಿ ಎನ್ ಜೈಕುಮಾರ್, ಜಂಟಿ ಕಾರ್ಯದರ್ಶಿ ಎಸ್.ಶಂಕರನ್ ಹಾಗೂ ವಿಶ್ವೇಶ್ವರಯ್ಯ ಹಾಜರಿದ್ದರು.