ಶಿವಮೊಗ್ಗ : ಆಗಸ್ಟ್ 7 ರಿಂದ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನ ಹಾಗೂ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಹಾರಾಜ ಟ್ರೋಫಿ ಟಿ-20 ಪಂದ್ಯಾವಳಿಯಲ್ಲಿ ಒಟ್ಟು ಆರು ತಂಡಗಳು ಸೆಣಸಾಡಲಿದ್ದು, ಶಿವಮೊಗ್ಗದ ತಂಡವೂ ಭಾಗಿಯಾಗಲಿದೆ ಎಂದು ಶಿವಮೊಗ್ಗ ವಲಯದ ಸಂಚಾಲಕರಾದ ಡಿ.ಎಸ್.ಅರುಣ್ ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯುವ ಪ್ರತಿಭೆಗಳಿಗೆ ಅವಕಾಶ ಹಾಗೂ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ-20ಯನ್ನು ಪರಿಚಯಿಸಿದೆ. ಪ್ರತಿಯೊಂದು ತಂಡವು ಆಯಾ ಪ್ರದೇಶದ ಇಬ್ಬರು ಆಟಗಾರರನ್ನು ಒಳಗೊಂಡಿರಬೇಕಾಗಿರುವುದರಿಂದ ಶಿವಮೊಗ್ಗದ ಆಟಗಾರರಿಗೆ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ-20 ತಂಡದಲ್ಲಿ ಸ್ಥಾನ ಪಡೆಯುಲು ಉತ್ತಮ ಅವಕಾಶ ಇದೆ ಎಂದು ಹೇಳಿದರು.
ಬಳಿಕ ಮಾತನಾಡಿದ ಕೆಸ್‌ಸಿಎ ಜಂಟಿ ಕಾರ್ಯದರ್ಶಿ ಶವೀರ್ ತಾರಾಪೂರ್, ಮೊದಲ ಹಂತದ ಪಂದ್ಯಗಳು ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆಯಲಿವೆ. ಮೈಸೂರಿನಲ್ಲಿ ಒಟ್ಟು 18 ಪಂದ್ಯಗಳು ನಡೆಯಲಿದ್ದು, ಫೈನಲ್ ಸೇರಿದಂತೆ 16 ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದು ಮಾಹಿತಿ ನೀಡಿದರು. ಅತ್ಯುತ್ತಮ ದರ್ಜೆಯ ಕ್ರಿಕೆಟಿಗರು ಟೂರ್ನಿಯಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ. ಆಟಗಾರರನ್ನು ಟ್ರಾಪ್ಟ್ ಮೂಲಕ ಆಯ್ಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಪ್ರತಿಷ್ಠಿತ ಮಹಾರಾಜ ಟ್ರೋಫಿಗಾಗಿ 6 ತಂಡಗಳ ಕಾದಾಟ : ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ, ರಾಯಚೂರು ಮತ್ತು ಮಂಗಳೂರು ಸೇರಿದಂತೆ ಒಟ್ಟು ಆರು ತಂಡಗಳು ಪ್ರತಿಷ್ಠಿತ ಮಹಾರಾಜ ಟ್ರೋಫಿಗಾಗಿ ಕಾದಾಟ ನಡೆಸಲಿವೆ. ಎ, ಬಿ, ಸಿ ಹಾಗೂ ಡಿ ವಿಭಾಗಗಳ ಮೂಲಕ ಆಟಗಾರರಿಗೆ ಪಂದ್ಯದ ಸಂಭಾವನೆ ನಿಗದಿ ಪಡಿಸಲಾಗುತ್ತದೆ ಎಂದು ತಿಳಿಸಿದರು.
ಭಾರತ ಹಾಗೂ ಐಪಿಎಲ್ ಟೂರ್ನಿಯಲ್ಲಿ ಆಡುತ್ತಿರುವ ಆಟಗಾರರು ’ಎ’ ವಿಭಾಗದ ಮೂಲಕ ತಂಡವನ್ನು ಪ್ರತಿನಿಧಿಸಿದರೆ, ರಣಜಿ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಮೂಲಕ ದೇಶಿ ಕ್ರಿಕೆಟ್ ಆಡಿದ ಆಟಗಾರರು ’ಬಿ’ ವಿಭಾಗದ ಮೂಲಕ, 19, 22, 25 ವಯೋಮಿತಿ ರಾಜ್ಯ ತಂಡ ಪ್ರತಿನಿಧಿಸಿದ ಆಟಗಾರರು ’ಸಿ’ ವಿಭಾಗ ಹಾಗೂ ಇನ್ನುಳಿದ ಆಟಗಾರರು ’ಡಿ’ ವಿಭಾಗದ ಮೂಲಕ ಈ ಟೂರ್ನಿಯಲ್ಲಿ ಆಯಾ ತಂಡಗಳನ್ನು ಪ್ರತಿನಿಧಿಸಲಿದ್ದಾರೆ ಎಂದು ಹೇಳಿದರು.
ಭಾರತ ಹಾಗೂ ಐಪಿಎಲ್ ಸ್ಟಾರ್ ಆಟಗಾರರು ಆಡುವ ನಿರೀಕ್ಷೆ : ಭಾರತ ಹಾಗೂ ಐಪಿಎಲ್ ಸ್ಟಾರ್ ಆಟಗಾರರಾದ ದೇವದತ್ ಪಡಿಕ್ಕಲ್, ಶ್ರೇಯಸ್ ಗೋಪಾಲ್, ಕೆ. ಗೌತಮ್, ಮನೀಶ್ ಪಾಂಡೆ, ಜಿ. ಸುಚಿತ್, ಕರುಣ್ ನಾಯರ್, ಮಯಾಂಕ್ ಅಗರ್ವಾಲ್, ಅಭಿನವ್ ಮನೋಹರ್, ಕೆ.ಸಿ ಕಾರಿಯಪ್ಪ, ಪ್ರವೀಣ್ ದುಬೆ ಹಾಗೂ ಅಭಿಮನ್ಯು ಮಿಥುನ್ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಆಡುವ ನಿರೀಕ್ಷೆ ಇದೆ.
ಮೈಸೂರು ಹಾಗೂ ಬೆಂಗಳೂರಿನಲ್ಲಿ ಎರಡು ವಾರಗಳ ಕಾಲ ನಡೆಯುವ ಮಹಾರಾಜ ಟ್ರೋಫಿ ಟೂರ್ನಿಯ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ 2 ಹಾಗೂ ಸ್ಟಾರ್ ಸ್ಪೋರ್ಟ್ ಕನ್ನಡ ವಾಹಿನಿಯಲ್ಲಿ ನೇರ ಪ್ರಸಾರವಾಗಲಿದೆ. ಪ್ರೇಕ್ಷಕರು ನೇರ ಪ್ರಸಾರವನ್ನು ಕಣ್ತುಂಬಿಸಿಕೊಳ್ಳಬಹುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮಂಜುನಾಥ್ ರಾಜ್, ಕೆ. ಶಶಿಧರ್, ಡಿ.ಟಿ. ಕುಮಾರ್, ಡಿ.ಆರ್. ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
ಓದಿ : ದಸರಾ ಮಹೋತ್ಸವ: ಉನ್ನತ ಮಟ್ಟದ ಸಭೆಯ ಕಾರ್ಯಸೂಚಿಯಲ್ಲಿ ದಿನಾಂಕ ದೋಷ