ಶಿವಮೊಗ್ಗ: ಎರಡೂ ಕಡೆಯಿಂದ ಹೊಂದಾಣಿಕೆ ಆದಾಗ ಮಾತ್ರ ದೇಶದಲ್ಲಿ ಶಾಂತಿ ನೆಲೆಸುತ್ತದೆ. ಇಲ್ಲವಾದರೆ ಇಲ್ಲ ಎಂದು ಪೇಜಾವರ ಶ್ರೀಗಳು ಹೇಳಿದರು. ನನಗರದಲ್ಲಿ ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿ ಆಶೀರ್ವಾದ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಅವರ ಮೇಲೆ ಗುರುತರವಾದ ಆರೋಪ ಬಂದಿದೆ. ಈ ಅಗ್ನಿ ಪರೀಕ್ಷೆಯಲ್ಲಿ ಅವರು ವಿಜಯಿಯಾಗಿ ಹೊರಗೆ ಬರಲಿ ಎಂದು ಆಶಿಸುತ್ತೇವೆ ಎಂದರು.
ದೇವರ ಸೇವೆ, ದೇಶದ ಸೇವೆಯನ್ನು ವಿಶೇಷವಾಗಿ ಮಾಡ್ತಿದ್ದಾರೆ. ಇನ್ನೂ ದೇಶದಲ್ಲಿ ಎಲ್ಲೆಡೆ ಹನುಮ ಜಯಂತಿ, ರಾಮನವಮಿ ಉತ್ಸವ ನಡೆಯುತ್ತಿದೆ. ಈ ಸಂದರ್ಭದಲ್ಲಿ ವಿರೋಧಗಳು, ಪ್ರತಿರೋಧಗಳು ನಡೆಯುತ್ತಿವೆ. ಮೆರವಣಿಗೆ ಮೇಲೆ ಕಲ್ಲು ತೂರಾಟ ನೋಡಿದರೆ ತುಂಬಾ ನೋವಾಗುತ್ತದೆ.
ರಾಮ ಹುಟ್ಟಿದ ನಾಡಿನಲ್ಲಿ, ಹನುಮ ಹುಟ್ಟಿದ ನಾಡಿನಲ್ಲಿ ಬಹುಸಂಖ್ಯಾತರು ಎನಿಸಿಕೊಂಡ ಹಿಂದೂಗಳ ಉತ್ಸವದಲ್ಲಿ ಇಂತಹ ವಿರೋಧ, ಆಘಾತಗಳು ಸಖ್ಯವಾದುದ್ದಲ್ಲ ಎಂದರು. ಇಂತಹ ಘಟನೆಗಳ ಮುಂದಿಟ್ಟುಕೊಂಡು ಸೌಹಾರ್ದ ಮಾತು ಆಡಲು ಬಂದರೆ ಅದಕ್ಕೆ ಅರ್ಥ ಶೂನ್ಯ.
ಹಾಗಾಗಿ, ಮುಂದಿನ ದಿನಗಳಲ್ಲಿ ಯಾವುದೇ ಪ್ರತಿರೋಧಗಳು ಬಾರದೇ ಎಲ್ಲರೂ ಕೂಡ ಸಹಬಾಳ್ವೆ ನಡೆಸಬೇಕು. ಯಾವುದೇ ಕಾಲದಲ್ಲಿ ಬದಲಾವಣೆ ಒಂದೇ ಕಡೆಯಿಂದ ಆಗಬಾರದು. ಗುರುಗಳು ಅವರನ್ನು ಮಠಕ್ಕೆ ಕರೆದು ಸ್ವಾಗತ ಮಾಡಿದ್ರು. ಆದ್ರೆ, ಅವರು ಯಾವುದೇ ಮಸೀದಿಗೆ ಯಾವ ಮಠಾಧೀಶರನ್ನು ಕರೆದು ಸತ್ಯನಾರಾಯಣ ಪೂಜೆ ನಡೆಸಲಿಲ್ಲ. ಒಂದೇ ಕಡೆಯಲ್ಲಿ ಇನ್ನು ಬಗ್ಗಬೇಕು. ಇನ್ನು ತಗ್ಗಬೇಕು, ನಾವು ಮಾತ್ರ ನಿಮ್ಮ ಉತ್ಸವಗಳಲ್ಲಿ ಪ್ರತಿರೋಧ ಮಾಡ್ತೀವಿ ಅಂದ್ರೆ ಹೇಗೆ? ಎಂದು ಪ್ರಶ್ನಿಸಿದರು.
ಆಪಾದನೆಯಿಂದ ಹೊರಗೆ ಬರುತ್ತೇನೆ : ಎಲ್ಲರ ಅಪೇಕ್ಷೆಯಂತೆ ನನ್ನ ಮೇಲಿನ ಆಪಾದನೆಯಿಂದ ಹೊರಗೆ ಬರುತ್ತೇನೆ ಎಂದು ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ಅವರು ಹೇಳಿದ್ದಾರೆ. ಶಿವಮೊಗ್ಗದ ಮನೆಗೆ ಭೇಟಿ ನೀಡಿ ಪೇಜಾವರ ಶ್ರೀಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದ್ಗುರುಗಳು ನಮ್ಮ ಮನೆಗೆ ಯಾವಾಗಲೂ ಕೂಡ ದೇವರ ರೂಪದಲ್ಲಿ ಬರ್ತಾನೆ ಇರ್ತಾರೆ ಎಂದರು.
ಈ ಹಿಂದಿನ ಪೇಜಾವರ ಶ್ರೀಗಳು ನಮ್ಮ ಮನೆಗೆ ಭೇಟಿ ನೀಡುತ್ತಿದ್ದರು. ಇಡೀ ಹಿಂದೂ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದ್ದರು. ನನ್ನ ಮೇಲೆ ಬಂದಿರುವ ಆರೋಪದಿಂದ ಮುಕ್ತವಾಗಿ ಹೊರಗೆ ಬರಬೇಕು ಅಂತಾ ಸ್ವಾಮೀಜಿಗಳು ಆಶೀರ್ವಾದ ಮಾಡಿದ್ದಾರೆ. ಇದು ಆದಷ್ಟು ಬೇಗ ಫಲ ಕೊಡುತ್ತದೆ ಎಂಬ ವಿಶ್ವಾಸ ಇದೆ ಎಂದರು.