ಶಿವಮೊಗ್ಗ: ಮಲೆನಾಡಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಸಾಗರ ತಾಲೂಕಿನ ವಿಶ್ವವಿಖ್ಯಾತ ಜೋಗ ಜಲಪಾತ ಮೈದುಂಬಿ ಧುಮ್ಮಿಕ್ಕುತ್ತಿದೆ. ಜೂನ್ ವೇಳೆಯಲ್ಲಿ ಉತ್ತಮ ಮಳೆಯಾಗಿತ್ತು. ಆ ಬಳಿಕ ಜೂನ್ ಅಂತ್ಯ ಹಾಗೂ ಜುಲೈ ತಿಂಗಳ ಆರಂಭದಲ್ಲಿ ಅಷ್ಟಾಗಿ ಮಳೆಯಾಗದ ಕಾರಣ ಜೋಗ ಜಲಪಾತ ಮಂಕಾಗಿತ್ತು. ಇದೀಗ ಕುಂಭದ್ರೋಣ ಮಳೆ ಸುರಿಯಲಾರಂಭಿಸಿದ್ದು, ಜೋಗ ಜಲಪಾತಕ್ಕೆ ಕಳೆ ಬಂದಿದೆ.
ಮಂಜು ಕವಿದ ವಾತಾವರಣದಲ್ಲಿ ಜೋಗ ಜಲಪಾತ ವೀಕ್ಷಣೆಯೇ ಒಂದು ಸುಂದರ ಅನುಭವ. ಈ ಅವಧಿಯಲ್ಲಿ ಜೋಗ ಜಲಪಾತ ಮಂಜಿನ ನಡುವೆ ಕಣ್ಮರೆಯಾಗುತ್ತದೆ. ನೋಡು ನೋಡುತ್ತಿದ್ದಂತೆ ಜಲಪಾತ ಮಂಜಿನ ನಡುವೆ ಕಾಣದಂತಾಗುತ್ತದೆ. ಕೆಲ ಸಮಯದಲ್ಲೇ ಮಂಜು ಸರಿದು ಜಲಪಾತ ದರ್ಶನ ನೀಡುತ್ತದೆ. ಒಟ್ಟಾರೆ ಈ ಮಂಜಿನಾಟದಲ್ಲಿ ಜೋಗದ ದರ್ಶನ ಮನಸ್ಸಿಗೆ ಮುದ ನೀಡುವಂತಿದೆ.
ಇದನ್ನೂ ಓದಿ:ದುಸ್ಸಾಹಕ್ಕೆ ಮುಂದಾಗಿ ಅಪಾಯಕ್ಕೆ ಸಿಲುಕಿದ ಕಾರು ಚಾಲಕ: ಗ್ರಾಮಸ್ಥರಿಂದ ರಕ್ಷಣೆ
ಜೂನ್ ತಿಂಗಳಲ್ಲಿ ಮುಂಗಾರು ಉತ್ತಮವಾಗಿದ್ದಾಗ ಕೊರೊನಾ ಲಾಕ್ಡೌನ್ ಹಿನ್ನೆಲೆ, ಜೋಗ ಜಲಪಾತಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿತ್ತು. ಸರ್ಕಾರ ಲೌಕ್ಡೌನ್ ಸಡಿಲಗೊಳಿಸಿ, ಕೋವಿಡ್ ನಿಯಮಗಳೊಂದಿಗೆ ಪ್ರವಾಸಿ ಸ್ಥಳಗಳಿಗೆ ತೆರಳಲು ಅವಕಾಶ ನೀಡಿತು.
ಇನ್ನೇನು ಪ್ರವಾಸಿಗರು ಜೋಗದತ್ತ ಮುಖ ಮಾಡುವ ಸಮಯಕ್ಕೆ ಮಲೆನಾಡಿನಲ್ಲಿ ಮಳೆ ತಗ್ಗಿದ ಕಾರಣ ಜೋಗ ತನ್ನ ವೈಭವ ಕಳೆದುಕೊಂಡಿತ್ತು. ಆದ್ರೀಗ ಮತ್ತೆ ಮುಂಗಾರು ಆರ್ಭಟಿಸುತ್ತಿದ್ದು, ಜೋಗದ ವೈಭವ ಮರುಕಳಿಸಿದೆ. ರಾಜ, ರಾಣಿ, ರೋರರ್ ಹಾಗೂ ರಾಕೆಟ್ನ ಅಬ್ಬರ ಹೆಚ್ಚಾಗಿದ್ದು, ಪ್ರವಾಸಿಗರನ್ನು ಸೆಳೆಯುತ್ತಿವೆ. ಇದೇ ರೀತಿ ಮಳೆ ಮುಂದುವರಿದಲ್ಲಿ ಜಲಪಾತದ ವೈಭವ ಇನ್ನಷ್ಟು ಹೆಚ್ಚುವುದರಲ್ಲಿ ಅನುಮಾನವೇ ಇಲ್ಲ.