ಶಿವಮೊಗ್ಗ: ಅಂತರ್‌ಜಾತಿಯ ಯುವತಿಯನ್ನು ಮದುವೆಯಾದ ಯುವಕನ ಕುಟುಂಬಕ್ಕೆ ಸ್ವಜಾತಿಯವರೇ ಬಹಿಷ್ಕಾರ ಹಾಕಿರುವ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ. ಶಿವಮೊಗ್ಗ ತಾಲೂಕು ಹೊರಬೈಲು ಗ್ರಾಮದ ದಂಪತಿಯ ಪುತ್ರ ರಾಮನಗರದ ಯುವತಿಯೊಂದಿಗೆ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಮದುವೆಯಾಗಿದ್ದರು.
ಅಂತರ್‌ಜಾತಿ ವಿವಾಹವಾಗಿದ್ದಕ್ಕೆ ಕೋಪಗೊಂಡು ಹೊರಬೈಲು ಗ್ರಾಮದ ಯುವಕನ ಜಾತಿಯವರೇ ಬಹಿಷ್ಕಾರ ಹಾಕಿದ್ದಾರೆ. ಯುವಕನ ಕುಟುಂಬದ ಮನೆಯ ಮದುವೆ, ನಾಮಕರಣ ಸೇರಿದಂತೆ ಇತರೆ ಯಾವುದೇ ಕಾರ್ಯಕ್ರಮಕ್ಕೂ ಯಾರೂ ಕರೆಯುತ್ತಿಲ್ಲ. ಈ ಕುಟುಂಬದ ಮನೆ ಹತ್ತಿರವೂ ಯಾರೂ ಸುಳಿಯುತ್ತಿಲ್ಲ. ಯುವಕ ಮನೆಯ ಹಿಂದೆ ಸಣ್ಣದೊಂದು ಕಿರಾಣಿ ಅಂಗಡಿ ಇದೆ. ಬಹಿಷ್ಕಾರ ಹಾಕಿದ ಪರಿಣಾಮ ಯಾರೂ ಕೂಡಾ ಅಂಗಡಿಗೂ ಬರುತ್ತಿಲ್ಲ. ಇವರಿಗೆ ಪ್ರತಿದಿನ ಅಂದಾಜು 1 ಸಾವಿರ ರೂ ವ್ಯಾಪಾರ ನಡೆಯುತ್ತಿತ್ತಂತೆ. ಈಗ ಅಂಗಡಿಯನ್ನೂ ಮುಚ್ಚಲಾಗಿದೆ.
ಗ್ರಾಮದಲ್ಲಿ ತಮಗೆ ಆಗಿರುವ ನೋವಿನಿಂದ ಈ ಜೋಡಿ ಕುಂಸಿ ಪೊಲೀಸ್ ಠಾಣೆಯಲ್ಲಿ 19 ಜನರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ತಾಲೂಕು ಆಡಳಿತ ಹೊರಬೈಲು ಗ್ರಾಮದಲ್ಲಿ ಶಾಂತಿ ಸಭೆ ನಡೆಸಿದೆ.
ಈ ಕುರಿತು ಮಾತನಾಡಿದ ದೂರುದಾರೆ, ''ಈಗ ಜಾತಿ ಬಗ್ಗೆ ಯಾರೂ ಉಸಿರು ಬಿಡುವುದಿಲ್ಲ. ಆದರೆ, ಈ ಊರಿನಲ್ಲಿ ಯಾಕೆ ಹೀಗೆ ಮಾಡುತ್ತಿದ್ದಾರೆ ಅನ್ನೋದು ನನಗೆ ಗೂತ್ತಿಲ್ಲ. ಮದುವೆಯಾದಾಗ ಎಲ್ಲರೂ ಚೆನ್ನಾಗಿಯೆ ಇದ್ದರು. ನಮ್ಮದು ತೋಟದ ಭಾಗದಲ್ಲಿ ಮನೆ ಇರುವುದರಿಂದ ಯಾರೂ ಇಲ್ಲಿಗೆ ಬರುತ್ತಿಲ್ಲ ಎಂದು ಸುಮ್ಮನಿದ್ದೆ. ನಮ್ಮ ಮದುವೆಯನ್ನು ನಮ್ಮ ತಂದೆ, ತಾಯಿ ಹಾಗೂ ನಮ್ಮ ಅತ್ತೆ, ಮಾವ ಮನೆಯವರೇ ಒಪ್ಪಿಕೊಂಡಾಗ ಈ ಗ್ರಾಮದವರು ಯಾಕೆ ಹೀಗೆ ಮಾಡುತ್ತಿದ್ದಾರೆ ಎಂದು ನನಗೆ ಗೂತ್ತಾಗಲಿಲ್ಲ".
"ನಂತರ ಗ್ರಾಮದ ನಮ್ಮದೇ ಸಮುದಾಯದ ಕುಟುಂಬಗಳು ನಮ್ಮ ಮನೆಗೆ ಯಾರೂ ಹೋಗಬಾರದು, ಅವರ ಮನೆಯ ಕಾರ್ಯಕ್ರಮಕ್ಕೆ ನಮ್ಮನ್ನೂ ಕರೆಯಬಾರದು ಎಂದು ಬಹಿಷ್ಕಾರ ಹಾಕಿದ್ದಾರೆ. ಇದರಿಂದ ನಮ್ಮ ಕುಟುಂಬ ಮಾನಸಿಕವಾಗಿ ಕುಗ್ಗಿ ಹೋಗಿದೆ. ನಮ್ಮ ಮೇಲೆ ನಮ್ಮ ಸಮುದಾಯದವರು ಹಾಕಿರುವ ಅಘೋಷಿತ ಬಹಿಷ್ಕಾರದ ವಿರುದ್ಧ ನಾನು, ನನ್ನ ಪತಿ ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ. ನಮಗಾದಂತೆ ಬೇರೆ ಯಾರಿಗೂ ಆಗಬಾರದು'' ಎಂದರು.
ಯುವಕನ ಚಿಕ್ಕಪ್ಪ ಭೈರಪ್ಪ ಪ್ರತಿಕ್ರಿಯಿಸಿ, ''ಯುವತಿಯನ್ನು ಯುವಕ ಮದುವೆಯಾಗಿದ್ದಾನೆ. ಇದು ನಮ್ಮ ಸಮುದಾಯಕ್ಕೆ ಮಾಡಿದ ಅಪಮಾನ ಎಂದು ನಮ್ಮ ಸಮುದಾಯದವರೇ ಹಲವು ಬಾರಿ ಸಭೆ ಸೇರಿ ತೀರ್ಮಾನಿಸಿ ನಮಗೆ ಬಹಿಷ್ಕಾರ ಹಾಕಿದ್ದಾರೆ. ಈ ಸಭೆಗೂ ನಮ್ಮ ಸಮಾಜದ ಹಿರಿಯರು ನಮಗೆ ಬಹಿಷ್ಕಾರ ಹಾಕಿದ್ದಾರೆ. ಸಮಾಜಕ್ಕೆ ಬುದ್ಧಿ ಹೇಳಬೇಕಾದ ಮುಖಂಡರೇ ಬಹಿಷ್ಕಾರ ಹಾಕಿಸಿದ್ದು ಸರಿಯಲ್ಲ. ಈಗ ಇಲ್ಲಿಗೆ ಬಂದು ಸಭೆ ನಡೆಸಿದವರು ತಮ್ಮ ಮಕ್ಕಳಿಗೆ ಅಂತರ್‌ಜಾತಿ ವಿವಾಹ ಮಾಡಿಸಿದ್ದಾರೆ. ಆದರೆ, ಇಲ್ಲಿ ಬಂದು ನಮ್ಮ ಮೇಲೆಯೇ ದೌರ್ಜನ್ಯ ಮಾಡಿದ್ದಾರೆ. ಯುವಕನ ಮನೆಯಲ್ಲಿ ಅಂಗಡಿ ಇತ್ತು. ಬಹಿಷ್ಕಾರ ಹಾಕಿದ ಮೇಲೆ ಯಾರೂ ವ್ಯಾಪಾರಕ್ಕೆ ಬಾರದ ಕಾರಣಕ್ಕೆ ಅಂಗಡಿ ಮುಚ್ಚಬೇಕಾಯಿತು. ನಮ್ಮ ಸಮಾಜದವರ ದೌರ್ಜನ್ಯದಿಂದ ಬೇಸತ್ತು ನಾವು ಪೊಲೀಸ್ ಠಾಣೆಯಲ್ಲಿ 19 ಜನರ ವಿರುದ್ಧ ದೂರು ನೀಡಿದ್ದೇವೆ'' ಎಂದು ನೊಂದು ನುಡಿದರು.
ತಹಶೀಲ್ದಾರ್ ನಾಗರಾಜ್ ನೇತೃತ್ವದಲ್ಲಿ ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಭೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಗಳಲ್ಲಿ ಎಲ್ಲರೂ ಸೌಹಾರ್ದಯುತವಾಗಿ ಜೀವನ ನಡೆಸಬೇಕು ಎಂದು ಮನವಿ ಮಾಡಲಾಗಿದೆ.
ತಹಶೀಲ್ದಾರ್ ಪ್ರತಿಕ್ರಿಯೆ: "ಬಹಿಷ್ಕಾರ ಹಾಕಿರುವ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದರಿಂದ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿದ್ದೇವೆ. ನಮ್ಮ ಗ್ರಾಮದಲ್ಲಿ ಈ ರೀತಿಯ ಪ್ರಕರಣ ನಡೆದಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅಲ್ಲದೇ ಅವರ ಸಮುದಾಯವರನ್ನೂ ಸಹ ಕರೆದು ವಿಚಾರಿಸಲಾಗಿದೆ. ಯುವಕನ ಕುಟುಂಬವನ್ನು ಯಾರೂ ಕಾರ್ಯಕ್ರಮಗಳಿಗೆ ಹಾಗೂ ಇತರೆ ಕೆಲಸಗಳಿಗೆ ಕರೆಯುತ್ತಿಲ್ಲ ಎಂದು ಹೇಳಿದ್ದಾರೆ. ಮುಂದೆ ಈ ರೀತಿ ನಡೆಯದಂತೆ ಸೂಚನೆ ನೀಡಲಾಗಿದೆ" ಎಂದು ತಹಶೀಲ್ದಾರ್ ನಾಗರಾಜ್ ತಿಳಿಸಿದರು.
ಇದನ್ನೂ ಓದಿ: ಬೆಂಗಳೂರು: ಆಟವಾಡುತ್ತಿದ್ದ ಬಾಲಕಿ ಈಜುಕೊಳದಲ್ಲಿ ಮುಳುಗಿ ಸಾವು