ಶಿವಮೊಗ್ಗ: ರಾಜ್ಯಸಭೆಗೆ ಭಾರತೀಯ ಜನತಾ ಪಕ್ಷದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವ ಕುರಿತು ಸಚಿವ ಕೆ.ಎಸ್. ಈಶ್ವರಪ್ಪ ಮಾಹಿತಿ ನೀಡಿದರು.
ಈ ಕುರಿತು ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕುಟುಂಬದಲ್ಲಿ ಹಿರಿಯರಿಗೆ ಗೌರವ ಜಾಸ್ತಿ. ಆ ಪ್ರಕಾರ ಈ ಆಯ್ಕೆ ಪ್ರಕ್ರಿಯೆ ನಡೆದಿದೆ. ಪಕ್ಷದ ಹೈಕಮಾಂಡ್ ಜಿಲ್ಲೆಯ, ರಾಜ್ಯದ, ದೇಶದ ಹಿತ ದೃಷ್ಟಿಯಿಂದ ಯೋಚನೆ ಮಾಡಿ ಆಯ್ಕೆ ಮಾಡಿದ್ದಾರೆ. ಹೈಕಮಾಂಡ್ ತೀರ್ಮಾನವನ್ನು ಕರ್ನಾಟಕದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಸ್ವಾಗತಿಸಿದ್ದಾರೆ ಎಂದರು.
ನಮ್ಮ ಯೋಚನೆಯಂತೆ ನಾವೊಂದು ಲಿಸ್ಟ್ ಕಳಿಸಿದ್ದೆವು. ಆದರೆ ಇದಕ್ಕಿಂತ ಒಳ್ಳೆಯವರು ಅಂತಾ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು ಎಂದು ಸಾಮಾನ್ಯ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ಇದರಿಂದ ಯಾವುದೇ ಅಸಮಾಧಾನ ಉಂಟಾಗಿಲ್ಲ. ಬಿಜೆಪಿ ಕಲ್ಲುಬಂಡೆ ಇದ್ದಂತೆ, ಸಂಘಟನೆಯನ್ನು ಶಕ್ತಿಶಾಲಿಯನ್ನಾಗಿ ಮಾಡುವ ದಿಕ್ಕಿನಲ್ಲಿ ಈ ಆಯ್ಕೆ ರಾಜ್ಯಕ್ಕೆ ತುಂಬಾ ಅನುಕೂಲ ಆಗುತ್ತದೆ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು.
ಜಿಲ್ಲೆ, ರಾಜ್ಯದಲ್ಲಿ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು ಎಂಬ ಮಾರ್ಗದರ್ಶನ ನಮಗೆ ಕೇಂದ್ರದಿಂದ ಬಂದಿದೆ. ಬರುವಂತಹ ದಿನಗಳಲ್ಲಿ ಕಾರ್ಯಕರ್ತರ ಶಕ್ತಿಯಿಂದ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.