ಶಿವಮೊಗ್ಗ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ವಿಚಾರವಾಗಿ ನಡೆಯುತ್ತಿರುವ ವಾದ-ವಿವಾದಗಳ ಬಗ್ಗೆ ಮಾಜಿ ಗೃಹ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಇಂದು (ಶುಕ್ರವಾರ) ತೀರ್ಥಹಳ್ಳಿಯಲ್ಲಿ ಸ್ಪಷ್ಟನೆ ಕೊಟ್ಟರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ವೈಯಕ್ತಿಕ ಬಣ್ಣ, ಜಾತಿನಿಂದನೆ ನನ್ನಿಂದ ಸಾಧ್ಯವಿಲ್ಲ. ನಾನು ಸಾರ್ವಜನಿಕ ಜೀವನದಲ್ಲಿ ಐದನೇ ಸಲ ಎಂಎಲ್ಎ ಆಗಿದ್ದೇನೆ. ಖರ್ಗೆ ಅವರ ಜೊತೆಗೆ ಕೂತು ವಿಧಾನಸಭೆಯಲ್ಲಿ ಕೆಲಸ ಮಾಡಿದ್ದೇನೆ. ಖರ್ಗೆಯವರ ಹಿರಿತನ, ಮುತ್ಸದ್ದಿತನ, ಅವರ ನಡವಳಿಕೆ ಬಗ್ಗೆ ನನ್ನಲ್ಲಿ ಗೌರವ ಮೂಡಿಸಿದೆ. ನಾನು ಅವರನ್ನು ಯಾವಾಗಲು ಗೌರವದಿಂದಲೇ ಕಾಣುತ್ತಿದ್ದವನು. ವೈಯಕ್ತಿಕವಾಗಿ ಕೀಳುಮಟ್ಟದಲ್ಲಿ ಟೀಕೆ ಮಾಡುವ ಹಾಗೂ ಕೀಳು ದೃಷ್ಟಿಯಿಂದ ನೋಡುವ ರಾಜಕಾರಣಿ ನಾನಲ್ಲ. ಅಷ್ಟು ದೊಡ್ಡವನು ಕೂಡಾ ಅಲ್ಲ, ನಾನು ರಾಜಕೀಯವಾಗಿ ಟೀಕೆ ಮಾಡಿದ್ದೇನೆ ಅಷ್ಟೇ. ಈ ಸಂದರ್ಭದಲ್ಲಿ ಅವರ ಹೆಸರು ನಾನು ಭಾಷಣ ಮಾಡುವ ವೇಳೆ, ಮಲ್ಲಿಕಾರ್ಜುನ ಖರ್ಗೆ ಅಂತ ಬಂದ್ರೆ ಅವರು ಕೊಟ್ಟ ಶಿಕ್ಷೆಗೆ ನಾನು ಒಳಗಾಗುತ್ತೇನೆ. ಇದು ನನ್ನ ಚಾಲೆಂಜ್'' ಎಂದರು.
''ಖರ್ಗೆ ಭಾರತದ ಮಟ್ಟಿಗೆ ದೊಡ್ಡ ಸ್ಥಾನದಲ್ಲಿದ್ದಾರೆ. ನಾನು ಏನೂ ಹೇಳದೇ ಇದ್ದರೂ ಕೂಡಾ ಸಣ್ಣವನನ್ನಾಗಿ ಮಾಡುವ ಕೆಲಸವನ್ನು ಕಾಂಗ್ರೆಸ್ ಮಿತ್ರರು ಮಾಡುತ್ತಿದ್ದಾರೆ. ಖರ್ಗೆ ಅವರನ್ನು ಸಣ್ಣವರನ್ನಾಗಿ ಮಾಡುವ ಪ್ರಯತ್ನವನ್ನು ನಾವು ಮಾಡಿಲ್ಲ. ಆ ಕೆಲಸವನ್ನು ಕಾಂಗ್ರೆಸ್ನವರು ಮಾಡುತ್ತಿದ್ದಾರೆ'' ಎಂದು ಟೀಕಿಸಿದರು.
''ಕಸ್ತೂರಿ ರಂಗನ್ ವರದಿ ಜಾರಿ ಸಿದ್ಧ ಎಂದು ಈಶ್ವರ ಖಂಡ್ರೆ ಹೇಳಿದ್ರು, ಕಸ್ತೂರಿ ರಂಗನ್ ವರದಿ ಕುರಿತು ಪಶ್ಚಿಮ ಘಟ್ಟದಲ್ಲಿ ಸಾರ್ವಜನಿಕವಾಗಿ ದೊಡ್ಡ ಸಂಚಲನವನ್ನೇ ಉಂಟು ಮಾಡಿದೆ. 2013ರಿಂದ 2018ರ ತನಕ ಸಿದ್ದರಾಮಯ್ಯನವರ ಸರ್ಕಾರ ಇತ್ತು. ಇವರು ಸರಿಯಾದ ವರದಿಯನ್ನು ನೀಡದೆ ಮಾಡಿರುವ ಉದಾಸೀನದಿಂದ ಸುಪ್ರೀಂ ಕೋರ್ಟ್ನ ಹಸಿರು ಪೀಠ ಇದರ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ'' ಎಂದರು.
''ಉತ್ತರ ಕರ್ನಾಟಕದ ಜನರ ಮೇಲಿನ ದ್ವೇಷದಿಂದ ನಾನು ಈ ಹೀಗೆ ಹೇಳಿಲ್ಲ. ಅವರೆಲ್ಲ ಶ್ರಮಿಕ ಜನರು. ಅವರನ್ನು ನೋಡಿದ್ರೆ ನನಗೆ ಖುಷಿ ಆಗುತ್ತದೆ. ಆದರೆ, ಗ್ಯಾರಂಟಿ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ನವರಿಗೆ ಸರ್ಕಾರ ಬರುತ್ತದೆ ಎಂಬ ಗ್ಯಾರಂಟಿ ಇರಲಿಲ್ಲ. ಇದ್ದಕ್ಕಿದ್ದಂತೆ ಇವರ ಸರ್ಕಾರ ಬಂತು. ಕೆಎಸ್ಆರ್ಟಿಗೆ 700 ಕೋಟಿ ರೂಪಾಯಿಗೂ ಅಧಿಕ ಹಣ ಖರ್ಚಾಗಿದೆ. ಆದರೆ, ಸರ್ಕಾರ ಕೇವಲ 150 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಆದರೆ, ಮುಂದಿನ ತಿಂಗಳು ಬಸ್ಗಳಿಗೆ ಡಿಸೇಲ್ ಹಾಕಲು ದುಡ್ಡಿಲ್ಲ. ಕೆಎಸ್ಆರ್ಟಿಸಿ ಸೇರಿದಂತೆ ಬೇರೆ ಬೇರೆಯವರಿಗೆ ಹಣ ನೀಡಲು ಇವರಿಗೆ ಆಗುತ್ತಿಲ್ಲ. ಮೆಸ್ಕಾಂ, ಹೆಸ್ಕಾಂನಲ್ಲಿ ಸಂಬಳ ನೀಡುತ್ತಿಲ್ಲ. ಮುಂದಿನ ತಿಂಗಳಿನಿಂದ ಎಲ್ಲವೂ ತಿಳಿದು ಬರುತ್ತದೆ'' ಎಂದರು.
''ಇವರ ಸರ್ಕಾರ ಬಂದು ಮೂರು ತಿಂಗಳಾಯಿತು. ಅಧಿಕಾರಕ್ಕೆ ಬಂದಿದ್ದಾರೆ, ಗ್ಯಾರಂಟಿ ಜಾರಿ ಮಾಡಲೇ ಬೇಕು. ಜಿಲ್ಲೆಯಲ್ಲಿ ತಿರುಗಾಟ ಮಾಡದೆಯೇ ದೆಹಲಿಯಲ್ಲಿಯೇ ಕುಳಿತುಕೊಂಡಿದ್ದಾರೆ. ಕಾಂಗ್ರೆಸ್ನವರು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ನನ್ಜ ಮೇಲೆ ಆರೋಪ ಮಾಡುತ್ತಿದ್ದಾರೆ'' ಎಂದು ಕಿಡಿಕಾರಿದರು.
ಇದನ್ನೂ ಓದಿ: ಜೆಡಿಎಸ್ ಅಸ್ತಿತ್ವಕ್ಕಾಗಿ ಕುಮಾರಸ್ವಾಮಿ ಅವರಿಂದ ಇಲ್ಲಸಲ್ಲದ ಆರೋಪ: ಸಚಿವ ಪ್ರಿಯಾಂಕ್ ಖರ್ಗೆ