ಶಿವಮೊಗ್ಗ: ಗಂಡ ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹೊರ ವಲಯದ ದುಮ್ಮಳ್ಳಿಯಲ್ಲಿ ನಡೆದಿದೆ. ಪತಿ ಪ್ರಕಾಶ್(55) ಎಂಬುವರು ಪತ್ನಿ ಶೋಭಾ( 50) ಅವರನ್ನು ಕೊಲೆ ಮಾಡಿದ್ದಾರೆ.
ದುಮ್ಮಳ್ಳಿಯಲ್ಲಿ ಪ್ರಕಾಶ್ ಮತ್ತು ಶೋಭಾ ಎಂಬ ದಂಪತಿ ಜೀವನೋಪಾಯಕ್ಕಾಗಿ ಹಾಲಿನ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದರು. ಕೆಲವು ದಿನಗಳಿಂದ ಪ್ರಕಾಶ್ ಹಾಗೂ ಶೋಭಾ ನಡುವೆ ಜಗಳ ನಡೆಯುತ್ತಿತ್ತು. ಇದು ಗ್ರಾಮದ ಜನರಿಗೆಲ್ಲಾ ತಿಳಿದಿತ್ತು. ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಿದೆ, ಆದರೆ ಗಂಡ ಹೆಂಡತಿ ಜಗಳ ಉಂಡು ಮಲಗಿ ಎದ್ದ ನಂತರ ಮುಂದುವರೆದು ಕೊಲೆಯಲ್ಲಿ ಅಂತ್ಯಗೊಂಡಿದೆ.
ಇಂದು ಬೆಳಗ್ಗೆ ಜಗಳ ವಿಕೋಪಕ್ಕೆ ತಿರುಗಿ ಪತಿ ಪ್ರಕಾಶ್(55) ಮನೆಯಲ್ಲಿದ್ದ ರಾಡಿನಿಂದ ಪತ್ನಿ ಶೋಭಾ (50) ತಲೆಗೆ ಹೊಡೆದು, ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಇನ್ನೂ ತುಂಗಾನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪರಾರಿಯಾದ ಪ್ರಕಾಶ ಬಂಧನಕ್ಕೆ ಬಲೆ ಬೀಸಿದ್ದಾರೆ.