ಶಿವಮೊಗ್ಗ: ಮೈಕ್ನಲ್ಲಿ ಅನೌನ್ಸ್ಮೆಂಟ್ ಮಾಡುತ್ತಿದ್ದವನನ್ನು ಇಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡುತ್ತದೆ ಅಂದರೆ ಅದು ಭಾರತೀಯ ಜನತಾ ಪಾರ್ಟಿಯ ವಿಶೇಷ ಎಂದು ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ನಂತರ ಶಿವಮೊಗ್ಗ ಜಿಲ್ಲೆಗೆ ಮೊದಲ ಬಾರಿಗೆ ಭೇಟಿ ನೀಡಿದ ಅವರನ್ನು ಪಕ್ಷದ ಕಚೇರಿಯಲ್ಲಿ ಗೌರವಿಸಲಾಯಿತು. ನಂತರ ಮಾತನಾಡಿದ ಸಚಿವ ಸಿಟಿ ರವಿ ನಾನು ಮೊದಲು ಪಕ್ಷದಲ್ಲಿ ಸೇರಿಕೊಂಡಾದ ನನ್ನ ಆರಂಭಿಕ ಕೆಲಸ ಮೈಕ್ ಅನೌನ್ಸ್ಮೆಂಟ್. ಆದರೆ ಒಬ್ಬ ಮೈಕ್ ಅನೌನ್ಸ್ಮೆಂಟ್ ಮಾಡುತ್ತಿದ್ದವನನ್ನು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಮಾಡುತ್ತಾರೆ ಎಂದರೆ ಅದು ಭಾರತೀಯ ಜನತಾ ಪಾರ್ಟಿಯ ವಿಶೇಷ ಎಂದರು.
ನಾನು ಭಾರತೀಯ ಜನತಾ ಪಾರ್ಟಿಗೆ ಸೇರಿಕೊಂಡಾಗ ಅಪ್ಪ ಹೇಳಿದ್ದರು, ಇದ್ಯಾವುದೋ ಪಕ್ಷ ಸುಮ್ನೆ ದೇವೆಗೌಡರ ಪಕ್ಷಕ್ಕೆ ಸೇರ್ಕೊಬೇಕಿತ್ತು ಅಂದಿದ್ದರು. ನಾನು ಇಂದು ಅಪ್ಪನಿಗೆ ತಮಾಷೆ ಮಾಡುತ್ತಿರುತ್ತೇನೆ. ಅಂದು ನಿನ್ನ ಮಾತು ಕೇಳಿ ದೇವೆಗೌಡರ ಪಕ್ಷಕ್ಕೆ ಸೇರಿಕೊಂಡಿದ್ದರೆ ದೊಡ್ಡಗೌಡರಿಗೆ ಜೈ, ಸಣ್ಣ ಗೌಡರಿಗೆ ಜೈ, ಮರಿ ಗೌಡರಿಗೆ ಜೈ ಅನ್ನಬೇಕಿತ್ತು. ಆದ್ರೆ ನಾನು ಅಪ್ಪನ ಮಾತು ಕೇಳದೇ ಇದ್ದಿದ್ದಕ್ಕೆ ಇಂದು ಭಾರತ್ ಮಾತಾಕಿ ಜೈ ಎನ್ನುವುದನ್ನು ಭಾರತೀಯ ಜನತಾ ಪಕ್ಷ ಹೇಳಿಕೊಟ್ಟಿದೆ ಎಂದರು. ಪಕ್ಷದಲ್ಲಿ ಎಲ್ಲರನ್ನೂ ಗುರುತಿಸುತ್ತಾರೆ ಎನ್ನುವುದಕ್ಕೆ ನಾನೇ ನಿದರ್ಶನ ಎಂದು ತಾವು ಪಕ್ಷದಲ್ಲಿ ಬೆಳೆದ ಬಗ್ಗೆ ಹೇಳಿಕೊಂಡರು.
ಈ ಸಂದರ್ಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಅರಗ ಜ್ಞಾನೇಂದ್ರ, ಆಯನೂರು ಮಂಜುನಾಥ್, ರುದ್ರೇಗೌಡ, ಕುಮಾರ್ ಬಂಗಾರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.