ಶಿವಮೊಗ್ಗ : ರಾಜ್ಯದಲ್ಲಿ ಮುಂಗಾರಿನ ಆರ್ಭಟ ಜೋರಾಗ್ತಿದೆ. ಮಲೆನಾಡಲ್ಲಿ ಕಳೆದೆರಡು ದಿನದಿಂದ ಧಾರಾಕಾರ ಮಳೆಯಾಗುತ್ತಿದೆ. ಮುಂಗಾರು ಆರಂಭದಲ್ಲೇ ಮಲೆನಾಡಿನ ವಿವಿಧ ತಾಲೂಕುಗಳಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಹೊಸನಗರ, ಸಾಗರ, ತೀರ್ಥಹಳ್ಳಿ ತಾಲೂಕಿನಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದೆ. ಹೊಸನಗರ ತಾಲೂಕಿನಲ್ಲಿ ಕಳೆದ 24 ಗಂಟೆಯ ಅವಧಿಯಲ್ಲಿ 148.8 ಮಿ.ಮೀ ಮಳೆಯಾಗಿದೆ.
ಹುಲಿಕಲ್, ಮಾಸ್ತಿಕಟ್ಟೆ, ಯಡೂರು, ಸಾಗರ ತಾಲೂಕಿನ ಜೋಗ-ಕಾರ್ಗಲ್ ಭಾಗದಲ್ಲೂ ಮಳೆಯಾಗುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ನದಿಗಳು ತುಂಬಿ ಹರಿಯುತ್ತಿವೆ. ಜೊತೆಗೆ ಜಲಾಶಯಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡಿದೆ.
ಇತ್ತ ತೀರ್ಥಹಳ್ಳಿ, ಆಗುಂಬೆ, ಮೇಗರವಳ್ಳಿ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಜಿಲ್ಲೆಯಾದ್ಯಂತ ಸರಾಸರಿ 38.40 ಮಿ.ಮೀನಷ್ಟು ಮಳೆಯಾಗಿದೆ. ತಾಲೂಕು ಭಾಗದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಶಿವಮೊಗ್ಗದ ತುಂಗಾ ಜಲಾಶಯಕ್ಕೆ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿದೆ.
ಸುಮಾರು 7 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಪ್ರಸ್ತುತ ಲಿಂಗನಮಕ್ಕಿ ಜಲಾಶಯಕ್ಕೆ 17 ಸಾವಿರ ಕ್ಯೂಸೆಕ್‌ನಷ್ಟು ಒಳಹರಿವಿದೆ. ಮಳೆ ಮುಂದುವರಿದರೆ ಸದ್ಯದಲ್ಲೇ ಜಲಾಶಯ ಭರ್ತಿಯಾಗಲಿದೆ.
ಓದಿ: 'ತಾವೇ ಗೆಲ್ಲೋಕೆ ತಿಣುಕಾಡೋ ಮನುಷ್ಯ ಮುಖ್ಯಮಂತ್ರಿ ಆಗೋ ಕನಸು ಕಾಣ್ತಿದ್ದಾರೆ'