ಶಿವಮೊಗ್ಗ: ಶಿವಮೊಗ್ಗ ತಾಲೂಕು ಸೋಗಾನೆಯಲ್ಲಿ ನಿರ್ಮಾಣ ಮಾಡುತ್ತಿರುವ ನೂತನ ವಿಮಾನ ನಿಲ್ದಾಣದ ಪ್ರದೇಶದಲ್ಲಿ ಭಾರಿ ಸ್ಫೋಟಕಗಳನ್ನು ಪೊಲೀಸರು ಜಪ್ತಿ ಪಡಿಸಿಕೊಂಡಿದ್ದಾರೆ.
36 ಬಾಕ್ಸ್ ಜಿಲಿಟಿನ್ ಕಡ್ಡಿ ಹಾಗೂ 3,600 ಡಿಟೊನೇಟರ್ ಪತ್ತೆಯಾಗಿದೆ. ವಿಮಾನ ನಿಲ್ದಾಣ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆ ಮಾಡಲು ಜಿಲ್ಲಾಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದರು. ಕಾಮಗಾರಿಗೆ ಬೇಕಾದ ಜಲ್ಲಿ ಹಾಗೂ ಕಲ್ಲುಗಳನ್ಜು ಪಡೆಯಲು ಸ್ಫೋಟಕಗಳನ್ನು ಬಳಸಲಾಗುತ್ತಿತ್ತು. ಈ ಸ್ಫೋಟಕಗಳನ್ನು ಚಿಕ್ಕಬಳ್ಳಾಪುರದಿಂದ ಅನುಮತಿಯ ಮೇರೆಗೆ ತರಿಸಲಾಗಿತ್ತು.
ಈ ಸ್ಫೋಟಕಗಳನ್ನು ಸುರಕ್ಷಿತ ವಾಹನದಲ್ಲಿ ತರಿಸಲಾಗಿತ್ತು. ಆದರೆ, ಸ್ಫೋಟಕಗಳನ್ನು ಸ್ಫೋಟಿಸುವವರು ಸಿಗದ ಕಾರಣ ಚಿಕ್ಕಬಳ್ಳಾಪುರದವರು ವಾಹನ ಅಲ್ಲೆ ಬಿಟ್ಟು ವಾಪಸ್ ಆಗಿದ್ದರು. ಕಾಮಗಾರಿ ನಡೆಸುವವರು ವಾಹನ ಗುರುತಿಸಿ ತುಂಗಾ ನಗರ ಪೊಲೀಸರಿಗೆ ತಿಳಿಸಿದ್ದಾರೆ.
ಪೊಲೀಸರು ಬಂದು ಸ್ಫೋಟಕಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿ, ಅದನ್ನು ನಿಷ್ಕ್ರಿಯಗೊಳಿಸಿ, ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ದೂರು ದಾಖಲಿದ್ದಾರೆ.
ಬೆಂಗಳೂರಿನ ಬಿಡಿಡಿಎಸ್ ಹಾಗೂ ಎಎಸ್ಸಿ ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿ, ಪರಿಶೀಲನೆ ಕೈಗೊಂಡ ನಂತರ ನಿಷ್ಕ್ರಿಯ ಮಾಡಲಾಗಿದೆ.