ಶಿವಮೊಗ್ಗ : ನಾನೇನು ಸೃಷ್ಟಿ ಮಾಡಿಕೊಂಡು ಏನನ್ನು ಹೇಳಿಲ್ಲ. ಆರ್ಎಸ್ಎಸ್ನ ಪ್ರಚಾರಕರು ಲೇಖಕರ ಮುಂದೆ ಹೇಳಿದನ್ನೇ ನಾನು ಹೇಳಿದ್ದೇನೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಆರ್ಎಸ್ಎಸ್ ಕುರಿತ ತಮ್ಮ ಹೇಳಿಕೆಯನ್ನು ಸರ್ಮರ್ಥಿಸಿಕೊಂಡರು.
ಭದ್ರಾವತಿಯಲ್ಲಿ ಮಾತನಾಡಿದ ಅವರು, ಆರ್ಎಸ್ಎಸ್ ಪ್ರಚಾರಕರು ಪುಸ್ತಕ ಬರೆಯುವ ಲೇಖಕರ ಮುಂದೆ ಹೇಳಿದ್ದನ್ನೇ ನಾನು ಹೇಳಿದ್ದೇನೆ. ಅದು ಬಿಟ್ಟು ಸೃಷ್ಟಿ ಮಾಡಿಕೊಂಡು ಹೇಳಿಲ್ಲ ಎಂದರು. ಸಿದ್ದರಾಮಯ್ಯ ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಾರೆ ಎಂಬ ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ ಹೆಚ್ಡಿಕೆ, ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಹಾಕುವುದು ಕಾಂಗ್ರೆಸ್ ಸೋಲಿಸಲು ಎಂಬ ಸಿದ್ದರಾಮಯ್ಯ ಹೇಳಿಕೆ ಹಿನ್ನೆಲೆ ನಾನು ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದೇನೆ.
ಸಿದ್ದರಾಮಯ್ಯನವರು ಅಲ್ಪಸಂಖ್ಯಾತರಿಗೆ ಎಷ್ಟು ಗೌರವ ಕೊಟ್ಟುಕೊಂಡು ಬಂದಿದ್ದಾರೆ ಎಂಬ ಐದಾರು ವಿಷಯಗಳ ಕುರಿತು ಪ್ರಸ್ತಾಪ ಮಾಡಿದ್ದೇನೆ. ಸಿದ್ದರಾಮಯ್ಯನವರು ಪದೇಪದೆ ನಮ್ಮ ಜೆಡಿಎಸ್ ಪಕ್ಷದ ಬಗ್ಗೆ ಪ್ರಸ್ತಾಪ ಮಾಡುವುದನ್ನು ನಾನು ಹೇಳಿದ್ದೇನೆ. ಅವರು ನಿಲ್ಲಿಸುವುದಾದರೆ ನಾನು ನಿಲ್ಲಿಸುತ್ತೇನೆ ಎಂದರು.
ಬ್ಯಾಟರಿ ಹಾಕ್ಕೊಂಡು ಹೋಗ್ಲಾ : ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಎಲ್ಲೆಲ್ಲೋ ಭೇಟಿಯಾಗಿರುತ್ತಾರೆ. ಅವರು ಭೇಟಿಯಾಗಿದ್ದು ಸತ್ಯ. ಅದನ್ನ ಸಾಬೀತು ಮಾಡಲು ನಾನು ಅವರು ಭೇಟಿ ಮಾಡಲು ಹೋದಾಗ ಬ್ಯಾಟರಿ ಹಾಕಿಕೊಂಡು ಹೋಗಬೇಕಿದೆ. ಅವರಿಬ್ಬರ ಭೇಟಿ ಇಲ್ಲ ಅಂತಾ ಅಂದ್ರೆ, ನಾನು ಮುಂದುವರೆಸಲು ಹೋಗಲ್ಲ ಎಂದರು.
ಹೇಳಿಕೆಗಳ ಮೂಲಕ ನಾನು ಗುರುತಿಸಿಕೊಳ್ಳುವ ಅವಶ್ಯತೆ ಇಲ್ಲ : ನಾನು ನಾಡಿನ ಮೂಲೆ ಮೂಲೆಯಲ್ಲೂ ಗುರುತಿಸಿಕೊಂಡಿದ್ದೇನೆ. ಜನರಿಗೆ ನನ್ನ ಪರಿಚಯ ಚೆನ್ನಾಗಿಯೇ ಇದೆ. ನಾನು ಜನತೆಗೆ ಹತ್ತಿರವಿದ್ದೇನೆ. ನಾನು ಜನರಿಂದ ಮರೆಯಾಗಿಲ್ಲ. ಅಲ್ಲದೆ ಈ ರೀತಿಯ ಹೇಳಿಕೆಗಳಿಂದ ನನ್ನನ್ನು ಗುರುತಿಸಿಕೊಳ್ಳುವಿಕೆಯ ಅವಶ್ಯಕತೆ ಇಲ್ಲ. ನಾನು ಯಾರ ವಿರುದ್ದವೂ ದ್ವೇಷ- ಅಸೂಹೆಯಿಂದ ಹೇಳಿಕೆ ನೀಡಿಲ್ಲ ಎಂದು ಹೇಳಿದರು.
ರಾಮಮಂದಿರದ ಲೆಕ್ಕ ನೀಡಿ : ರಾಮಮಂದಿರ ನಿರ್ಮಾಣದ ಬಗ್ಗೆ ಪಾರದರ್ಶಕತೆ ಇದ್ದರೆ ಅವರಿಗೆ ಲೆಕ್ಕ ನೀಡಲು ಏನು. 1989-91ರ ತನಕ ಅಡ್ವಾನಿ ಅವರು ನಡೆಸಿದ ರಥಯಾತ್ರೆಯ ಲೆಕ್ಕ ಯಾರಿಟ್ಟಿದ್ದಾರೆ. ಅವರ ಬಳಿ ಲೆಕ್ಕವಿದ್ದರೆ ಕೊಡಲು ತೊಂದರೆ ಏನು?, ನೀವು ತುಂಬ ಪ್ರಮಾಣಿಕರಾಗಿದ್ರೆ ಲೆಕ್ಕ ನೀಡಿ ಎಂದು ಒತ್ತಾಯಿಸಿದರು. ಇದೇ ವೇಳೆ ಭದ್ರಾವತಿಯ ಮಾಜಿ ಶಾಸಕ ಅಪ್ಪಾಜಿಗೌಡ ಅವರ ಮನೆಗೆ ಭೇಟಿ ನೀಡಿದರು. ಈ ವೇಳೆ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸ್ವಾಗತಿಸಿದರು.