ಶಿವಮೊಗ್ಗ: ಶಿವಮೊಗ್ಗ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಹಾಲು ಉತ್ಪಾದಕರಿಗೆ, ನಾಳೆ(ಮಂಗಳವಾರ) ಯಿಂದ ಪ್ರತಿ ಲೀಟರ್ಗೆ ರೂ. 2.50 ಏರಿಕೆ ಮಾಡುವ ಮೂಲಕ ಶಿವರಾತ್ರಿಗೆ ಗುಡ್ ನ್ಯೂಸ್ ನೀಡಿದೆ.
ಶಿವಮೊಗ್ಗ ತಾಲೂಕು ಮಾಚೇನಹಳ್ಳಿಯ ಶಿಮುಲ್ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಅಧ್ಯಕ್ಷ ಶ್ರೀಪಾದ್ ರಾವ್ ಮಾತನಾಡಿ, ನಾಳೆ(ಮಂಗಳವಾರ) ಯಿಂದ ಪ್ರತಿ ಲೀಟರ್ ಹಾಲಿಗೆ ರೂ. 2.50 ದರ ನೀಡಲಾಗುವುದು ಎಂದರು.
ಸೋಮವಾರ ಆಡಳಿತ ಮಂಡಳಿಯ ಸಭೆಯಲ್ಲಿ ರೈತರಿಗೆ ದರ ಏರಿಕೆ ಮಾಡುವ ಕುರಿತು ಚರ್ಚೆ ನಡೆಸಿ, ನಂತರ ಮಾಧ್ಯಮದವರಿಗೆ ದರ ಏರಿಕೆಯ ಕುರಿತು ಮಾಹಿತಿ ನೀಡಿದರು. ಈ ದರ ಏರಿಕೆಯಿಂದ ಹಾಲು ಉತ್ಪಾದಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಈ ರೀತಿ ಪ್ರೋತ್ಸಾಹ ಧನ ನೀಡುವ ಮೂಲಕ ಹಾಲು ಉತ್ಪಾದನೆಗೆ ಸಹಕಾರ ಆಗುತ್ತದೆ ಎಂದು ಹೇಳಿದರು.
ಶಿಮುಲ್ ಆವರಣದಲ್ಲಿ ಹಾಲಿನ ಪೌಡರ್ ಉತ್ಪಾದನೆ ಮಾಡುವ ಕುರಿತು ಆಡಳಿತ ಮಂಡಳಿಯು ಸಂಸದ ರಾಘವೇಂದ್ರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಇದಕ್ಕಾಗಿ 1,400 ಕೋಟಿ ರೂ. ಬೇಡಿಕೆಯನ್ನು ಸಲ್ಲಿಸಲಾಗಿತ್ತು. ಸಂಸದ ರಾಘವೇಂದ್ರ ಅವರು ಸಿಎಂ ಭೇಟಿ ಮಾಡಿ, ಈ ಬಜೆಟ್ನಲ್ಲಿಯೇ ಘೋಷಣೆ ಮಾಡುವಂತೆ ವಿನಂತಿಸಿಕೊಂಡಿದ್ದಾರೆ. ಇದರಿಂದ ಇತರೆ ಕೆಎಂಎಫ್ ಡೈರಿಯಂತೆ ಶಿಮುಲ್ನಲ್ಲಿಯೂ ಸಹ ಹಾಲಿನ ಪೌಡರ್ ಘಟಕ ಪ್ರಾರಂಭವಾಗುವ ಎಲ್ಲಾ ಲಕ್ಷಣಗಳಿವೆ ಎಂದು ತಿಳಿಸಿದರು.
ಇದನ್ನೂ ಓದಿ: ಗ್ರಾಹಕರ ಜೇಬಿಗೆ ಕತ್ತರಿ: ಅಮೂಲ್ ಹಾಲಿನ ದರದಲ್ಲಿ ಲೀಟರ್ಗೆ 2 ರೂ. ಏರಿಕೆ
ಹಾಲು ಸಾಗಣೆಯ ದರ ಶಿಮುಲ್ಗೆ ಹೆಚ್ಚಾಗುತ್ತಿರುವುದರಿಂದ ದಾವಣಗೆರೆಯಲ್ಲಿ ಒಂದು ಹಾಲು ಉತ್ಪಾದನಾ ಘಟಕ ಪ್ರಾರಂಭಿಸುವ ಕುರಿತು ಚಿಂತನೆ ಇದೆ. ಇದಕ್ಕಾಗಿ ಹಣ ಬೇಕಾಗುತ್ತದೆ. ದಾವಣಗೆರೆಯಲ್ಲಿ ಈಗಾಗಲೇ ಜಾಗದ ಗುರುತು ಸಹ ಮಾಡಲಾಗಿದೆ. ಇಲ್ಲಿ ಹಾಲಿನ ಘಟಕ ಪ್ರಾರಂಭವಾಗುವುದರಿಂದ ಹಾಲನ್ನು ದಾವಣಗೆರೆ ಹಾಗೂ ಚಿತ್ರದುರ್ಗದಿಂದ ತಂದು, ಅದನ್ನು ಮತ್ತೆ ವಾಪಸ್ ಕಳುಹಿಸುವ ಸಾಗಣೆ ವೆಚ್ಚ ಅಧಿಕವಾಗುತ್ತಿರುವುದರಿಂದ ದಾವಣಗೆರೆಯಲ್ಲಿಯೇ ಹಾಲಿನ ಘಟಕವನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು. ಸದ್ಯ ಹಾಲಿದ ದರ ಏರಿಕೆ ಮಾಡುವುದರಿಂದ ಶಿಮುಲ್ಗೆ ಪ್ರತಿ ತಿಂಗಳು 4.5 ಕೋಟಿ ಹೊರೆ ಆಗುತ್ತಿದೆ ಎಂದು ಮಾಹಿತಿ ನೀಡಿದರು.
ನಷ್ಟದಲ್ಲಿದ್ದ ಶಿಮುಲ್ ಹಾಲಿ ಲಾಭದ ಹಾದಿಯಲ್ಲಿದೆ. ಮಾರ್ಚ್ ವೇಳೆ ಇದು 6 ರಿಂದ 7 ಕೋಟಿ ರೂ. ಲಾಭಗಳಿಸುವ ನಿರೀಕ್ಷೆ ಇದೆ. ಇದೇ ರೀತಿ ಹಾಲಿನ ದರ ಏರಿಕೆಯನ್ನು ಗ್ರಾಹಕರಿಗೆ ಕಳೆದ ಮೂರು ವರ್ಷಗಳಿಂದ ಮಾಡಿಲ್ಲ, ಹಾಲಿನ ದರ 5 ರೂ. ಮಾಡಬೇಕೆಂದು ಪ್ರಸ್ತಾವನೆಯನ್ನು ಸಿಎಂಗೆ ಕಳುಹಿಸಲಾಗಿದೆ. ದರ ಏರಿಕೆಯ ನಿರೀಕ್ಷೆಯಲ್ಲಿದ್ದೇವೆ ಎಂದು ವಿವರಿಸಿದರು.