ಶಿವಮೊಗ್ಗ: ಮನೆಯಲ್ಲಿ ಆಟ ಆಡುವಾಗ ಆಕಸ್ಮಿಕವಾಗಿ ಕುತ್ತಿಗೆಗೆ ವೇಲ್ (ದುಪ್ಪಟ್ಟಾ) ಬಿಗಿದು ಆರು ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಯಡೇಹಳ್ಳಿಕೆರೆಯಲ್ಲಿ ಸಂಭವಿಸಿದೆ.
ಯಡೇಹಳ್ಳಿಕೆರೆ ಗ್ರಾಮದ ವಿಜಯ ಹಾಗೂ ಶಶಿಕಲಾ ಎಂಬುವರ ಪುತ್ರಿ ಹರ್ಷಿತಾ ಮೃತಪಟ್ಟವಳು. ಹರ್ಷಿತಾ ವೇಲ್ನ್ನು ಕಿಟಕಿಗೆ ಕಟ್ಟಿಕೊಂಡು ಜೋಕಾಲಿ ಆಟ ಆಡುತ್ತಿದ್ದಾಗ ವೇಲ್ ಆಕೆಯ ಕುತ್ತಿಗೆಗೆ ಬಿಗಿದುಕೊಂಡಿದೆ. ಬಾಲಕಿಯು ಉಸಿರುಗಟ್ಟಿ ಒದ್ದಾಡುವಾಗ ಕಂಡ ಆಕೆಯ ಅಣ್ಣ ಮನೆ ಹೊರಗೆ ಕೆಲಸ ಮಾಡುತ್ತಿದ್ದ ತನ್ನ ತಾಯಿಯನ್ನು ಕರೆದುಕೊಂಡು ಬರುವಷ್ಟರಲ್ಲಿ ಹರ್ಷಿತಾ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.
ಈ ಕುರಿತು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.