ಶಿವಮೊಗ್ಗ: ಬೀದಿ ನಾಟಕ ಅಕಾಡೆಮಿ ಸ್ಥಾಪಿಸುವ ಮೂಲಕ ಬೀದಿ ನಾಟಕ ಕಲಾವಿದರ ಬದುಕಿಗೆ ಸರ್ಕಾರ ಆಸರೆಯಾಗಬೇಕು ಎಂದು ಜಿಲ್ಲಾ ಜಾನಪದ ಸಂಗೀತ ಮತ್ತು ಬೀದಿನಾಟಕ ಕಲಾ ತಂಡಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಡಾ.ಗಣೇಶ್ ಆರ್ ಕೆಂಚನಾಲ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸರ್ಕಾರ ಅನೇಕ ಅಕಾಡೆಮಿಗಳನ್ನು ಸ್ಥಾಪಿಸಿದೆ. ಅದರಂತೆ ಬೀದಿ ನಾಟಕ ಅಕಾಡೆಮಿ ಪ್ರಾರಂಭಿಸುವ ಮೂಲಕ ಬೀದಿ ನಾಟಕ ಕಲಾವಿದರ ಬದುಕಿಗೆ ಆಸರೆಯಾಗಬೇಕು ಎಂದು ಒತ್ತಾಯಿಸಿದರು.
ಬೀದಿಯಲ್ಲಿ ನಿಂತು ಸರ್ಕಾರದ ಯೋಜನೆಗಳನ್ನು ಸಮಾಜಕ್ಕೆ ತಿಳಿಸುವ ಹಾಗೂ ಜಾಗೃತಿ ಮೂಡಿಸುವ ಕಲಾವಿದರ ಬದುಕು ಇಂದು ಬೀದಿಗೆ ಬಂದಿದೆ. ಕಳೆದ ನಲವತ್ತು ವರ್ಷಗಳಿಂದ ಸಮಾಜದಲ್ಲಿ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸುತ್ತಿರುವ ಕಲಾವಿದರ ಬದುಕು ಕೊರೊನಾ ಸಂದರ್ಭದಲ್ಲಿ ಯಾವುದೇ ಕಾರ್ಯಕ್ರಮಗಳು ಇಲ್ಲದರಿಂದ ಹಾಗೂ ಸರ್ಕಾರದಿಂದ ಯಾವುದೇ ಜಾಗೃತಿ ಕಾರ್ಯಕ್ರಮಗಳು ಇಲ್ಲವಾದ್ದರಿಂದ ಕಲಾವಿದರ ಬದುಕು ಸಂಕಷ್ಟಕ್ಕೆ ಸಿಲುಕಿದೆ.
ಹಾಗಾಗಿ ಸರ್ಕಾರ ಜಾಗೃತಿ ಕಾರ್ಯಕ್ರಮಗಳನ್ನು ಪ್ರಾರಂಭಿಸುವ ಮೂಲಕ ಬೀದಿನಾಟಕ ಕಲಾವಿದರ ಕುಟುಂಬವನ್ನು ಉಳಿಸಬೇಕು. ಈ ಕುರಿತು ಸಂಬಂಧ ಪಟ್ಟ ಎಲ್ಲಾ ಅಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ ಹಾಗಾಗಿ ಆದಷ್ಟು ಬೇಗ ಕಾರ್ಯಕ್ರಮ ಗಳನ್ನು ಪ್ರಾರಂಭಿಸಿ ಎಂದು ಮನವಿ ಮಾಡಿಕೊಂಡರು.
ಹಾಗೇಯೇ ಸರ್ಕಾರ ರಾಜೋತ್ಸವ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ನೀಡುತ್ತಿದೆ ಅದರಂತೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಲಾವಿದರಿಗೂ ಪ್ರಶಸ್ತಿ ,ಸನ್ಮಾನ ಗಳು ನೀಡಬೇಕಿದೆ ಎಂದರು.