ಶಿವಮೊಗ್ಗ: ಮನುಷ್ಯ ಮೃತಪಟ್ಟ ಮೇಲೆ ಆತನ ಶವ ಸಂಸ್ಕಾರವನ್ನು ಅತ್ಯಂತ ಗೌರವಯುತವಾಗಿ ನಡೆಸಿ ಅವರ ಆತ್ಮಕ್ಕೆ ಶಾಂತಿ ಸಿಗಬೇಕೆಂದು ಸಂಬಂಧಿಕರು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಆದರೆ ಇದಕ್ಕೆ ಅಪವಾದ ಎಂಬ ಘಟನೆಯು ತೀರ್ಥಹಳ್ಳಿ ತಾಲೂಕು ದೊಡ್ಡಕೆರೆ ಗ್ರಾಮದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಕೋಣಂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡಕೆರೆ ಗ್ರಾಮದ ವ್ಯಕ್ತಿಯೊಬ್ಬರು ನಿನ್ನೆ(ಶುಕ್ರವಾರ) ಸಾವನ್ನಪ್ಪಿದ್ದರು. ಅವರ ಅಂತ್ಯಸಂಸ್ಕಾರವನ್ನು ನಿನ್ನೆಯೇ ನಡೆಸಲಾಯಿತು. ಆದರೆ ಈ ಸಂದರ್ಭದಲ್ಲಿ ಎಡಬಿಡದೆ ಮಳೆ ಸುರಿಯಲು ಪ್ರಾರಂಭಿಸಿತು.
ಶವ ಸಂಸ್ಕಾರ ಮಾಡಲು ಸಶ್ಮಾನದಲ್ಲಿ ಇದ್ದ ಕಟ್ಟಡದ ಮೇಲ್ಛಾವಣಿಯ ಶೀಟುಗಳು ತೂತಾಗಿ ಸೋರುತ್ತಿವೆ. ಮೇಲ್ಛಾವಣಿಯನ್ನು ಹಾಕಿಸುವ ಪ್ರಯತ್ನವನ್ನು ಗ್ರಾಮ ಪಂಚಾಯತಿ ಮಾಡದ ಕಾರಣ ನಿನ್ನೆ ಶವ ಸಂಸ್ಕಾರ ಮಾಡಲು ಹೋಗಿದ್ದ ಕುಟುಂಬಸ್ಥರು ಸಾಕಷ್ಟು ಕಷ್ಟಪಡಬೇಕಾಯಿತು.
ಅಂತ್ಯಕ್ರಿಯೆಗೆ ಶವವನ್ನು ಚಿತೆಯ ಮೇಲೆ ಇಟ್ಟು ಪೂಜೆ ಸಲ್ಲಿಸಿ ಇನ್ನೇನೂ ಬೆಂಕಿ ಹಚ್ಚಬೇಕು ಅನ್ನುವಷ್ಟರಲ್ಲಿ ಮಳೆ ಬಂದ ಕಾರಣ ನೀರು ಚಿತೆಯ ಮೇಲೆ ಬಿದ್ದು ಶವ ಸಂಸ್ಕಾರಕ್ಕೆ ತಡೆ ಉಂಟಾಗಿತ್ತು. ನಂತರ ಮಳೆ ಕಡಿಮೆಯಾದ ಮೇಲೆ ಶವ ಸಂಸ್ಕಾರ ಮಾಡಲಾಗಿದೆ. ಆದಷ್ಟು ಬೇಗ ಕೋಣಂದೂರು ಗ್ರಾಮ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಶಿವಮೊಗ್ಗದಲ್ಲಿ ಚುರುಕುಗೊಂಡಿರುವ ವರ್ಷಧಾರೆ: ಜಿಲ್ಲೆಯಲ್ಲಿ 1 ವಾರದಿಂದ ಮಳೆ ಉತ್ತಮವಾಗಿಯೇ ಬರುತ್ತಿದೆ. ಜಿಲ್ಲೆಯಲ್ಲಿ ಜುಲೈ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 687.87 ಮಿಮೀ ಇದ್ದು, ಈವರೆಗೆ ಸರಾಸರಿ 73.13 ಮಿಮೀ ಮಳೆ ಮಾತ್ರ ದಾಖಲಾಗಿದೆ. ಇನ್ನು 2 ದಿನಗಳ ಹಿಂದೆ ಶಿವಮೊಗ್ಗ 10.50 ಮಿಮೀ, ಭದ್ರಾವತಿ 8.50 ಮಿ.ಮೀ, ತೀರ್ಥಹಳ್ಳಿ 44.80 ಮಿ.ಮೀ, ಸಾಗರ 57.10 ಮಿಮೀ, ಶಿಕಾರಿಪುರ 10.60 ಮಿಮೀ, ಸೊರಬ 15.20 ಮಿಮೀ ಹಾಗೂ ಹೊಸನಗರ 53.20 ಮಿಮೀ ಮಳೆಯಾಗಿತ್ತು.
ಜಿಲ್ಲೆಯ ಜಲಾಶಯಗಳ ನೀರಿನ ಮಟ್ಟ ಜುಲೈ 5 ರಂದು ದಾಖಲಾಗಿರುವ ಮಾಹಿತಿ ನೋಡುದಾದರೆ, ಲಿಂಗನಮಕ್ಕಿ ಜಲಾಶಯದಲ್ಲಿ- 1819 ಕ್ಯೂಸೆಕ್ (ಗರಿಷ್ಠ)ವಿದ್ದು ನೀರಿನ ಮಟ್ಟ- 1742.70 ಕ್ಯೂಸೆಕ್, ಒಳ ಹರಿವು- 9237.00, ಹೊರ ಹರಿವು( ವಿದ್ಯುತ್)-1677.00 ಕ್ಯೂಸೆಕ್ ಕಳೆದ ವರ್ಷ ನೀರಿನ ಮಟ್ಟ 1762.10 ಕ್ಯೂಸೆಕ್ ಆಗಿದೆ. ಹಾಗೆ ಭದ್ರಾ- (ಕ್ಯೂಸೆಕ್ಗಳಲ್ಲಿ) 186 (ಗರಿಷ್ಠ), ನೀರಿನ ಮಟ್ಟ- 137.20, ಒಳ ಹರಿವು- 2397.00, ಹೊರ ಹರಿವು- 209.00, ಕಳೆದ ವರ್ಷ ನೀರಿನ ಮಟ್ಟ 158.20.ಆಗಿದೆ. ತುಂಗಾ- (ಕ್ಯೂಸೆಕ್ಗಳಲ್ಲಿ) 588.24 (ಗರಿಷ್ಠ), ನೀರಿನ ಮಟ್ಟ- 587.54, ಒಳ ಹರಿವು- 4830.00, ಹೊರ ಹರಿವು- 50.00. ಕಳೆದ ವರ್ಷ ನೀರಿನ ಮಟ್ಟ 588.24 ಆಗಿತ್ತು.
ಇದನ್ನು ಓದಿ: ಅಂತ್ಯಸಂಸ್ಕಾರದ ವೇಳೆ ರುದ್ರಭೂಮಿಗೆ ನುಗ್ಗಿದ ಮಳೆ ನೀರು; ಜನರ ಪರದಾಟ