ಶಿವಮೊಗ್ಗ: ಮದುವೆಗೆ ಹೋದವರು ನವದಂಪತಿಗೆ ಗಿಫ್ಟ್ ನೀಡೋದು ಸಾಮಾನ್ಯ. ಆದ್ರೆ ಮದುವೆಗೆ ಬಂದವರಿಗೇ ಈ ನವಜೋಡಿ ಗಿಫ್ಟ್ ನೀಡಿದ ಅಪರೂಪದ ವಿವಾಹ ಕಾರ್ಯಕ್ರಮ ನಗರದಲ್ಲಿ ಜರುಗಿತು.
ಬೆಂಗಳೂರಿನ ಶ್ರೀಕೃಷ್ಣ ಹಾಗೂ ಮೇಲ್ಪಾಲಿನ ನಿಕ್ಷುಬ ಇಬ್ಬರು ಇಂದು ತೀರ್ಥಹಳ್ಳಿಯ ಗಾಯಿತ್ರಿ ಮಂದಿರದಲ್ಲಿ ಸತಿ-ಪತಿ ಆದ್ರು. ಆಧುನಿಕತೆಯ ಅಬ್ಬರದ ಇಂದಿನ ದಿನಗಳಲ್ಲಿ, ನಾಡಿನ ಭಾಷೆ ನೆಲ ಜಲದ ಬಗ್ಗೆ ವಿಶಿಷ್ಟ ಪ್ರೀತಿ ಹೊಂದಿರುವ ಈ ನವ ದಂಪತಿ ತಮ್ಮ ಮದುವೆ ಕಾರ್ಯಕ್ರಮದಲ್ಲಿ ಪರಿಸರ ಉಳಿಸೋ ವಚನ ಕೈಗೊಂಡು ಅಮೂಲ್ಯ ಗಿಡಗಳನ್ನು ಹಾಗೂ ಗಿಡಮರಗಳ ಮಾಹಿತಿವುಳ್ಳ ಪುಸ್ತಕವನ್ನು ಉಚಿತವಾಗಿ ವಿತರಿಸುವ ಮೂಲಕ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ.
ಈ ವಿವಾಹೋತ್ಸವದಲ್ಲಿ ಗಿಡಗಳ ವಿತರಣೆ ಅಷ್ಟೇ ಅಲ್ಲದೆ ಮರಗಳ ಅದ್ಭುತ ಔಷಧಿ ಗುಣಗಳ ಮಾಹಿತಿ ಇರುವ ಬೆಳ್ಳಿ-ಬಂಗಾರ ಅನ್ನೋ ಪುಸ್ತಕವನ್ನು ಬಿಡುಗಡೆ ಮಾಡಿಸಿದರು. ಹಿರಿಯ ಆಯುರ್ವೇದ ತಜ್ಞ ಡಾ. ಪಿ. ಸತ್ಯನಾರಾಯಣ ಭಟ್ಟ ಬರೆದ ಈ ಪುಸ್ತಕವನ್ನು ಮಹಾನಸ ಆಯುರ್ವೇದ ಕೇಂದ್ರದ ಡಾ. ರೇಖಾ ಹಾಗೂ ಡಾ. ಅರ್ಚನಾ ಪ್ರಕಾಶನದವರು ಪ್ರಕಟಿಸಿದ್ದರು. ಇನ್ನು ಮದುವೆಗೆ ಬಂದವರಿಗೆಲ್ಲ ತಾಂಬೂಲವಾಗಿ ಉಚಿತವಾಗಿ ಈ ಬುಕ್ ವಿತರಿಸಲಾಯಿತು.
ವಧು-ವರನ ಈ ವಿನೂತನ ಕಾಯಕಕ್ಕೆ ಬಂಧುಮಿತ್ರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶ್ರೀಕೃಷ್ಣ ಹಾಗೂ ನಿಕ್ಷುಬ ಅವರು ಗಿಡ ಹಾಗೂ ಪುಸ್ತಕವನ್ನು ಉಡುಗರೆಯಾಗಿ ನೀಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.