ಶಿವಮೊಗ್ಗ: ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ ಆಗಿರುವ ಹಿನ್ನೆಲೆಯಲ್ಲಿ ಅಲ್ಲಿನ ಪರಿಸ್ಥಿತಿ ಅಯೋಮಯವಾಗಿದೆ. ರಾಜ್ಯದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಗುಡ್ಡಗಳು ಕುಸಿದಿವೆ, ರಸ್ತೆ ಸಂಚಾರ ಬಂದ್ ಆಗಿದೆ. ಈ ಬೆನ್ನಲ್ಲೇ ಕೇದಾರನಾಥನ ದರ್ಶನ ಪಡೆಯಲು ಶಿವಮೊಗ್ಗ ಜಿಲ್ಲೆಯಿಂದ ತೆರಳಿದ್ದ ನಾಲ್ವರು ಭಕ್ತರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.
ಕೇದಾರನಾಥಕ್ಕೆ ತೆರಳಿದ್ದ ಭದ್ರಾವತಿಯ ಹುತ್ತಾ ಕಾಲೋನಿಯ ವೀರಣ್ಣ ದಂಪತಿ ಹಾಗೂ ಅವರ ಸೋದರ ಸಂಬಂಧಿ ಸದ್ಯಕ್ಕೆ ಕೇದಾರನಾಥದಿಂದ ಕೇವಲ 22 ಕಿ.ಮೀ ದೂರದ ಸೀತಾಪುರದಲ್ಲಿದ್ದಾರೆ. ವೀರಣ್ಣ (74), ಪತ್ನಿ ಸುಶೀಲಮ್ಮ (63) ಹಾಗೂ ಭರ್ಮಪ್ಪ (70), ಪತ್ನಿ ಮಹಾಲಕ್ಷ್ಮಿ ( 60 ) ಸದ್ಯಕ್ಕೆ ಸೀತಾಪುರದಲ್ಲಿ ಆಶ್ರಯ ಶಿಬಿರದಲ್ಲಿದ್ದಾರೆ.
ಆಗಸ್ಟ್ 2 ರಂದು ಉತ್ತರ ಭಾರತ ಪ್ರವಾಸಕ್ಕೆ ತೆರಳಿದ್ದ ಈ ಕುಟುಂಬಗಳು, ಕಳೆದೆರೆಡು ದಿನಗಳ ಹಿಂದೆ ಕೇದಾರನಾಥನ ದರ್ಶನ ಪಡೆಯಬೇಕಿತ್ತು. ಆದರೆ, ದರ್ಶನ ಸಾಧ್ಯವಾಗದೇ ಶಿಬಿರದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಗುಡ್ಡ ಕುಸಿತದಿಂದಾಗಿ ಮುಂದೆಯೂ ಹೋಗಲಾಗದೇ, ವಾಪಸ್ ಬರಲಾಗದ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಹಾಗಾಗಿ, ಕೇದಾರನಾಥನ ದರ್ಶನ ಪಡೆಯದೇ ವಾಪಸ್ ಬರಲು ನಿರ್ಧಾರ ಮಾಡಿದ್ದು, ಸ್ಥಳೀಯ ಆಡಳಿತದ ನಿರ್ಧಾರಕ್ಕೆ ಕಾಯುತ್ತಿದ್ದೇವೆ, ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ದಂಪತಿಗಳು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಹಿಮಾಚಲದ ಸೋಲನ್‌ನಲ್ಲಿ ಮೇಘಸ್ಫೋಟ : ಒಂದೇ ಕುಟುಂಬದ 7 ಮಂದಿ ಬಲಿ , ಮೂವರು ನಾಪತ್ತೆ !
ಇನ್ನು ಕಳೆದ ಎರಡು ದಿನಗಳ ಹಿಂದೆ ಸೋಲನ್‌ನ ಕಂದಘಾಟ್ ಉಪವಿಭಾಗದ ಜಾಡೋನ್ ಗ್ರಾಮದಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ 7 ಜನರು ಸಾವನ್ನಪ್ಪಿದ್ದಾರೆ. ಮೂವರು ಕಾಣೆಯಾಗಿದ್ದು, ಐವರನ್ನು ರಕ್ಷಿಸಲಾಗಿದೆ ಎಂದು ಕಂದಘಾಟ್ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಸಿದ್ಧಾರ್ಥ ಆಚಾರ್ಯ ತಿಳಿಸಿದ್ದರು. ಅಷ್ಟೇ ಅಲ್ಲದೆ, ಪ್ರಾಕೃತಿಕ ವಿಕೋಪದಿಂದಾಗಿ ಎರಡು ಮನೆಗಳು ಮತ್ತು ಒಂದು ಗೋಶಾಲೆ ಕೊಚ್ಚಿ ಹೋಗಿದೆ. ಹಾಗೆಯೇ, ಆ. 10 ರಂದು ಸಿರ್ಮೌರ್‌ನಲ್ಲಿ ಸಹ ಮೇಘಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ನಾಪತ್ತೆಯಾಗಿದ್ದ ಒಂದೇ ಕುಟುಂಬದ 5 ಸದಸ್ಯರು ಅವಶೇಷಗಳ ಅಡಿಯಲ್ಲಿ ಹೂತು ಹೋಗಿದ್ದರು.
ಇದನ್ನೂ ಓದಿ : Cloud burst : ಮೇಘಸ್ಫೋಟಕ್ಕೆ ತತ್ತರಿಸಿದ ಹಿಮಾಚಲ ಪ್ರದೇಶ.. ಚರಂಡಿಯಲ್ಲಿ ಸಿಲುಕಿದ ವಾಹನಗಳು
ಕಳೆದ ಜುಲೈ 20 ರಂದು ಸಹ ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಮೇಘಸ್ಫೋಟ ಸಂಭವಿಸಿತ್ತು. ಕಮ್ರು ಎಂಬ ಗ್ರಾಮದ ಬಳಿಯ ಪರ್ವತಗಳಲ್ಲಿ ಸ್ಫೋಟ ಸಂಭವಿಸಿ ಭಾರಿ ಪ್ರವಾಹ ಉಂಟಾಗಿತ್ತು. ಮೇಘಸ್ಫೋಟದಿಂದ ಗ್ರಾಮದ ಮಧ್ಯದಲ್ಲಿ ಬೃಹದಾಕಾರದ ಚರಂಡಿ ನಿರ್ಮಾಣವಾಗಿದ್ದು, ಈ ವೇಳೆ ಹಲವು ವಾಹನಗಳು ಸಿಲುಕಿಕೊಂಡಿದ್ದವು. ಜೊತೆಗೆ, ಅಪಾರ ಪ್ರಮಾಣದ ಸೇಬು ತೋಟ ಸೇರಿದಂತೆ ಅನೇಕ ಮನೆಗಳು ಹಾನಿಗೀಡಾಗಿದ್ದವು. ಹಿಮಾಚಲದಲ್ಲಿ ಕಳೆದೆರಡು ದಿನಗಳಲ್ಲಿ 55 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ : ಹಿಮಾಚಲಪ್ರದೇಶದಲ್ಲಿ ಮೇಘಸ್ಫೋಟ , ಒಂದೇ ಕುಟುಂಬದ ಐವರು ನಾಪತ್ತೆ, ಮತ್ತೆ ಪ್ರವಾಹ ಪರಿಸ್ಥಿತಿ : ವಿಡಿಯೋ