ಶಿವಮೊಗ್ಗ : ಆಗಸ್ಟ್ 11ರಿಂದ ಶಿವಮೊಗ್ಗ ಸೋಗಾನೆ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಪ್ರಾರಂಭವಾಗಲಿದೆ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು. ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕನಸಿನ ವಿಮಾನ ನಿಲ್ದಾಣವಾದ ಶಿವಮೊಗ್ಗ ವಿಮಾನ ನಿಲ್ದಾಣ ಆಗಸ್ಟ್ 11ರಿಂದ ಕಾರ್ಯಾರಂಭವಾಗಲಿದೆ. ಇಂಡಿಗೋ ಸಂಸ್ಥೆಯ ವಿಮಾನಗಳು ಹಾರಾಟ ನಡೆಸಲಿವೆ ಎಂದು ತಿಳಿಸಿದರು.
ಈ ವಿಮಾನ ಬೆಳಗ್ಗೆ ಬೆಂಗಳೂರಿನಿಂದ 10 ಗಂಟೆಗೆ ಹೊರಟು ಸೋಗಾನೆ ವಿಮಾನ ನಿಲ್ದಾಣಕ್ಕೆ 11 ಗಂಟೆಗೆ ಆಗಮಿಸಲಿದೆ. ನಂತರ ಮಧ್ಯಾಹ್ನ 1 ಗಂಟೆಗೆ ಶಿವಮೊಗ್ಗದಿಂದ ಹೊರಟು 2 ಗಂಟೆಗೆ ಬೆಂಗಳೂರು ತಲುಪಲಿದೆ ಎಂದರು. ಸದ್ಯಕ್ಕೆ ಇಂಡಿಗೋ ಸಂಸ್ಥೆಯ ವಿಮಾನಗಳು ಹಾರಾಟ ನಡೆಸಲಿವೆ ಎಂದರು.
ಈ ಆಗಸ್ಟ್ 11ರಂದು ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ನಡೆಸಲಿದೆ. ಈ ಮಧ್ಯೆ ಉಡಾನ್ ಯೋಜನೆ ಅಡಿ ಶಿವಮೊಗ್ಗದಿಂದ ಬೆಂಗಳೂರು ಹೊರತುಪಡಿಸಿ ಇತರ ನಾಲ್ಕು ಮಾರ್ಗಗಳಲ್ಲಿ ವಿಮಾನ ಹಾರಾಟಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಉಡಾನ್ ಯೋಜನೆಯಡಿ 4 ಮಾರ್ಗಕ್ಕೆ ಅನುಮತಿ :
ಮಾರ್ಗ 1 – ಹೈದರಾಬಾದ್ – ಶಿವಮೊಗ್ಗ – ಗೋವಾ – ಶಿವಮೊಗ್ಗ – ತಿರುಪತಿ – ಶಿವಮೊಗ್ಗ – ಹೈದರಾಬಾದ್
ಮಾರ್ಗ 2 – ಹೈದರಾಬಾದ್ – ಶಿವಮೊಗ್ಗ – ದೆಹಲಿ – ಶಿವಮೊಗ್ಗ – ಚೆನ್ನೈ – ಶಿವಮೊಗ್ಗ – ಬೆಂಗಳೂರು – ಶಿವಮೊಗ್ಗ – ಹೈದರಾಬಾದ್
ಮಾರ್ಗ 3 – ಹೈದರಾಬಾದ್ – ಶಿವಮೊಗ್ಗ – ಹೈದರಾಬಾದ್
ಮಾರ್ಗ 4 – ಬೆಂಗಳೂರು – ಸೇಲಂ – ಕೊಚ್ಚಿನ್ – ಸೇಲಂ – ಬೆಂಗಳೂರು – ಶಿವಮೊಗ್ಗ – ಬೆಂಗಳೂರು
10 ಕೆಜಿ ಅಕ್ಕಿಯ ಹಣವನ್ನು ಪಡಿತರರಿಗೆ ನೀಡಬೇಕು : ರಾಜ್ಯ ಸರ್ಕಾರ ಅಕ್ಕಿ ಬದಲಾಗಿ ಹಣ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಂಸದ ಬಿ.ವೈ ರಾಘವೇಂದ್ರ, ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಣದಿಂದ ಹೊಟ್ಟೆ ತುಂಬಲ್ಲ ಎಂದು ಹೇಳಿದ್ದರು. ಆದರೆ ಈಗ ಅಕ್ಕಿ ಬದಲಾಗಿ ಯಾಕೆ ಹಣ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ವೋಟಿಗಾಗಿ ದೊಡ್ಡ ದೊಡ್ಡ ಭಾಷಣ ಮಾಡಿದಂತೆ ಈಗ ಕೇಂದ್ರ ಸರ್ಕಾರ ನೀಡುತ್ತಿರುವ ಐದು ಕೆ.ಜಿ ಅಕ್ಕಿ ಹೊರತುಪಡಿಸಿ ಹತ್ತು ಕೆಜಿ ಅಕ್ಕಿಯನ್ನು ರಾಜ್ಯದ ಜನರಿಗೆ ನೀಡಬೇಕು. ಈಗ ಐದು ಕೆ.ಜಿ ಅಕ್ಕಿಯ ಹಣ ನೀಡುತ್ತೇವೆ ಎನ್ನುವ ಮುಖ್ಯಮಂತ್ರಿಗಳು ಹತ್ತು ಕೆ.ಜಿ ಅಕ್ಕಿಯ ಹಣ ಪಡಿತರದಾರರಿಗೆ ನೀಡಬೇಕು ಎಂದು ಆಗ್ರಹಿಸಿದರು.
ಸುಳ್ಳಿನ ಭರವಸೆ ನೀಡಿ ಅಧಿಕಾರ ಅನುಭವಿಸುತ್ತಿರುವ ರಾಜ್ಯ ಸರ್ಕಾರ ಎಲ್ಲಿ ಸರ್ಕಾರದ ಬಸ್ ಗಳ ಓಡಾಟ ಇಲ್ಲವೋ ಅಲ್ಲಿ ಖಾಸಗಿ ಬಸ್ಗಳ ಜೊತೆಗೆ ಒಪ್ಪಂದ ಮಾಡಿಕೊಂಡು ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕು. ಜನ ನಿಮ್ಮ ಮಾತನ್ನ ನಂಬಿ ಮತ ಹಾಕಿದ್ದಾರೆ. ಹಾಗಾಗಿ ಮತದಾರರ ನಂಬಿಕೆ ಉಳಿಸಿಕೊಳ್ಳಿ ಎಂದು ಹೇಳಿದರು.
ಇದನ್ನೂ ಓದಿ : 5 ಕೆಜಿ ಅಕ್ಕಿಯೊಂದಿಗೆ 340 ರೂ. ಜನರ ಅಕೌಂಟ್ಗಳಿಗೆ ಹಾಕಬೇಕು: ಸಂಸದ ಎಸ್ ಮುನಿಸ್ವಾಮಿ