ಶಿವಮೊಗ್ಗ: ಶುಂಠಿಯಲ್ಲಿದ್ದ ಗಂಧಕ ಮಿಶ್ರಿತ ನೀರು ಅಕಾಲಿಕ ಮಳೆಯಿಂದ ಕೆರೆಗೆ ಸೇರಿದ ಪರಿಣಾಮ ಸಾವಿರಾರು ಮೀನುಗಳು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಸೊರಬದ ಹೀರೆಶಕುನ ಗ್ರಾಮದಲ್ಲಿ ನಡೆದಿದೆ.
ಹೀರೆಶಕುನದ ಪ್ರಗತಿಪರ ಕೃಷಿಕ ಪರಶುರಾಮ ಸಣ್ಣಬೈಲು ಎಂಬುವರಿಗೆ ಸೇರಿದ ಸರ್ವೆ ನಂ. 54 ರ ಜಮೀನಿನ ಕೆರೆಯಲ್ಲಿಂದು ಬೆಳಗ್ಗೆಯಿಂದಲೇ ಸಾಕಷ್ಟು ಮೀನುಗಳು ಸಾವಿಗೀಡಾಗಿವೆ. ಕೆರೆಯ ಸುತ್ತ ಸುಮಾರು ಐದಾರು ಶುಂಠಿ ಕಣಗಳಿವೆ. ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಶುಂಠಿ ಒಣಗಿಸಲು ಬಳಸಿದ ರಾಸಾಯನಿಕ ವಸ್ತುವಾದ ಗಂಧಕವು ಮಳೆಯ ನೀರಿನೊಂದಿಗೆ ಬೆರೆತು ಕೆರೆ ಸೇರಿದ್ದರಿಂದ ಮೀನುಗಳು ಸಾವೀಗೀಡಾಗಿವೆ ಎನ್ನಲಾಗ್ತಿದೆ.
ಶುಂಠಿ ಕಣದಲ್ಲಿ ಬಳಸುವ ಗಂಧಕವು ಮನುಷ್ಯನ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ವಸ್ತುವಾಗಿದೆ. ಅಲ್ಲದೆ, ಗಂಧಕದ ಹೊಗೆ ಸೇವಿಸಿದರೆ ಅಸ್ತಮಾದಂತಹ ಕಾಯಿಲೆ ಬರುವ ಸಾಧ್ಯತೆ ಸಾಕಷ್ಟಿದೆ ಎಂದು ವೈಜ್ಞಾನಿಕವಾಗಿ ಎಲ್ಲರಿಗೂ ತಿಳಿದಿರುವ ಸಂಗತಿ. ಕೊರೊನಾದ ಈ ಸಂದರ್ಭದಲ್ಲಿ ಕೇವಲ ಹಣ ಗಳಿಕೆಗಾಗಿ ಮತ್ತೊಬ್ಬರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಶುಂಠಿ ಕಣದವರ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಮೀನು ಸಾಕಾಣಿಕೆಗಾರ ಪರಶುರಾಮಪ್ಪ ಒತ್ತಾಯಿಸಿದ್ದಾರೆ.
ಕಳೆದ ಜುಲೈ ಸಂದರ್ಭದಲ್ಲಿ ಸುಮಾರು 5 ಸಾವಿರ ಮೀನಿನ ಮರಿಗಳನ್ನು ತಂದಿದ್ದ ಪರಶುರಾಮ ತಮ್ಮ ಕೆರೆಯಲ್ಲಿ ಬಿಟ್ಡಿದ್ದರು. ಉತ್ತಮವಾಗಿ ಬೆಳೆದಿದ್ದ ಮೀನುಗಳು ಇದೀಗ ಸಾವಿರಾರು ಸಂಖ್ಯೆಯಲ್ಲಿ ದಿಢೀರನೆ ಸಾವಿಗೀಡಾಗಿರುವುದು ಆತಂಕಕ್ಕೆ ಕಾರಣವಾಗಿದೆ. ನಿತ್ಯದ ಅಡುಗೆ ಮತ್ತು ಇತರೆ ಸಂದರ್ಭಗಳಲ್ಲಿ ಹಾಗೂ ಆಯುಷ್ ಇಲಾಖೆ ಹೇಳಿದಂತೆ ಕಷಾಯದಲ್ಲಿ ಶುಂಠಿಯನ್ನು ಬಳಸುತ್ತಿದ್ದೇವೆ. ಇಂತಹ ರಾಸಾಯನಿಕ ಮಿಶ್ರಿತ ಶುಂಠಿಯನ್ನು ಬಳಸುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ. ಈ ನಿಟ್ಟಿನಲ್ಲಿ ತಾಲೂಕು ಆಡಳಿತ, ಆರೋಗ್ಯ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.
ಓದಿ: ಕೊರೊನಾ ನಡುವೆ ಬೆಂಗಳೂರು ಕರಗ.. ಸರಳ ಆಚರಣೆಗೆ ಜಿಲ್ಲಾಡಳಿತ ಸಜ್ಜು