ಶಿವಮೊಗ್ಗ: ಶಿವಮೊಗ್ಗದ ಇತಿಹಾಸದಲ್ಲೇ ಖಾಸಗಿ ನರ್ಸಿಂಗ್ ಹೋಮ್ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಯಾವುದೇ ಅಗ್ನಿ ಅವಘಡಗಳು ಸಂಭವಿಸಿಲ್ಲ. ಜಿಲ್ಲೆಯಲ್ಲಿ ನಾಲ್ಕು ಸೂಪರ್ ಸ್ಪೆಷಾಲಿಟಿ ಮತ್ತು 70ಕ್ಕೂ ಅಧಿಕ ನರ್ಸಿಂಗ್ ಹೋಮ್ಗಳಿವೆ. ಇಲ್ಲಿ ಅಗ್ನಿ ಸುರಕ್ಷತೆಗೆ ಸಾಕಷ್ಟು ಒತ್ತು ನೀಡಲಾಗಿದೆ. ಹಾಗಾದರೆ ಆಸ್ಪತ್ರೆಗಳು ಕೈಗೊಂಡಿರುವ ಸುರಕ್ಷತಾ ಕ್ರಮಗಳೇನು ಎಂಬುದರ ಮಾಹಿತಿ ಇಲ್ಲಿದೆ...
ಕಳೆದ ವರ್ಷ ಮೆಗ್ಗಾನ್ ಮಕ್ಕಳ ವಿಭಾಗದ ತೀವ್ರ ನಿಗಾ ಘಟಕದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಅಗ್ನಿ ದುರಂತ ಸಂಭವಿಸಿತ್ತು. ನಂತರ ಹಸುಗೂಸುಗಳನ್ನು ಸರ್ಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಮುಂದೆ ಇಂತಹ ಘಟನೆಗಳು ಸಂಭವಿಸದಂತೆ ಮತ್ತಷ್ಟು ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಗ್ರಹ ವ್ಯಕ್ತವಾಗಿತ್ತು.
ಸ್ಪಿಂಕ್ಲರ್, ಸ್ನೂಕರ್, ಆಟೋಮ್ಯಾಟಿಕ್ ವಾಟರ್ ಪಂಪಿಂಗ್ ಅನ್ನು ಹೊಂದಿದ್ದೇವೆ. ಕಟ್ಟಡದಲ್ಲಿ ಪ್ರತಿ 10 ಮೀಟರ್ಗೆ ಒಂದರಂತೆ ಸ್ನೂಕರ್ ಇಡಲಾಗಿದೆ. ಅಲ್ಲದೆ, ಬೆಂಕಿ ಅವಘಡ ಸಂಭವಿಸಿದ ತಕ್ಷಣ ಏನು ಮಾಡಬೇಕೆಂಬುದರ ಕುರಿತು ನಮ್ಮ ಸಿಬ್ಬಂದಿ ತರಬೇತಿ ಪಡೆದಿದ್ದಾರೆ. ಅಗ್ನಿ ಶಾಮಕ ಇಲಾಖೆಯ ಪ್ರತಿಯೊಂದು ಅಂಶಗಳನ್ನು ಉತ್ತಮವಾಗಿ ಪಾಲಿಸುತ್ತೇವೆ. ನಮ್ಮದಷ್ಟೇ ಅಲ್ಲ, ಎಲ್ಲಾ ಆಸ್ಪತ್ರೆಗಳಲ್ಲೂ ಸುರಕ್ಷತೆ ಕೈಗೊಳ್ಳಲಾಗಿದೆ ಎಂದು ಮ್ಯಾಕ್ಸ್ ಆಸ್ಪತ್ರೆಯ ಎಂ.ಡಿ. ಡಾ. ನಾಗೇಂದ್ರ ಮಾಹಿತಿ ನೀಡಿದರು.
ಕಟ್ಟಡ ಅನುಮತಿಗೆ ಏನೇನು ಮಾಡಬೇಕು?: ಬಹುಮಹಡಿ ಕಟ್ಟಡದವರಿಗೆ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳ ಮಹಜರುಪಡಿಸಿದ ನಂತರ ಅನುಮತಿ ದೊರೆಯುತ್ತದೆ. ಅದು ಸ್ವಲ್ಪ ತಡವಾಗಹುದು. 15 ಮೀಟರ್ ಒಳಗಿನ ಕಟ್ಟಡಕ್ಕೆ ಬೇಗ ಅನುಮತಿ ಲಭ್ಯವಾಗುತ್ತದೆ. ಅವರು ಸಹ ಅಗ್ನಿ ಶಾಮಕದಳ, ಮೆಸ್ಕಾಂ ಹಾಗೂ ಕೆಎಸ್ಬಿಸಿಬಿಯಿಂದ ಅನುಮತಿ ಪಡೆಯಬೇಕು. ಸಾಮಾನ್ಯ ಕಟ್ಟಡಕ್ಕೆ ಪಾಲಿಕೆಯ ಎಂಜಿನಿಯರ್ ಸ್ಥಳ ಮಹಜರು ನಡಿಸುತ್ತಾರೆ. ಇದಕ್ಕೆ ಹೆಚ್ಚಿನ ದಿನ ಬೇಕಾಗುವುದಿಲ್ಲ ಎನ್ನುತ್ತಾರೆ ಪಾಲಿಕೆ ಆಯುಕ್ತ ಚಿದಾನಂದ ವಾಠರೆ.
ಆನ್ಲೈನ್ಮಯ: ಪಾಲಿಕೆಗೆ ಅರ್ಜಿ ಹಾಕುವುದು ಸೇರಿದಂತೆ ಅನುಮತಿ ಪಡೆಯುವುದು ಸಹ ಆನ್ಲೈನ್ ಆಗಿದೆ. ಅನುಮತಿಗೂ ಮುನ್ನ ಅಗ್ನಿ ಶಾಮಕದಳದ ಅಧಿಕಾರಿಗಳು ಸ್ಥಳ ಮಹಜರು ಮಾಡುತ್ತಾರೆ. ಅರ್ಜಿಯಲ್ಲಿ ಎಷ್ಟು ಅಂತಸ್ತಿನ ಕಟ್ಟಡ ಎಂಬುದನ್ನು ನಮೂದಿಸಿರಬೇಕು. ಮೊದಲೇ ಕಟ್ಟಡ ಕಟ್ಟಿದ್ದು, ನಂತರ ಅನುಮತಿಗೆ ಅರ್ಜಿ ಹಾಕಿದರೆ ಎನ್ಬಿಸಿ ನಿರಪೇಕ್ಷಣಾ ಅನುಮತಿ ಪತ್ರ ನೀಡಲಾಗುತ್ತದೆ ಎಂದು ಜಿಲ್ಲಾ ಅಗ್ನಿ ಶಾಮಕ ದಳ ಜಿಲ್ಲಾಧಿಕಾರಿ ಅಶೋಕ್ ಕುಮಾರ್ ಹೇಳಿದರು.