ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆ ತಡವಾಗಿ ಪ್ರಾರಂಭವಾಗುವ ಜೊತೆಗೆ ಮಳೆ ನೀರು ಅಲ್ಲಲ್ಲಿ ಸಂಗ್ರಹವಾಗಿ ಡೆಂಘಿ ಹಾಗೂ ಚಿಕೂನ್ ಗೂನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಜುಲೈ ತಿಂಗಳವರೆಗೆ 225 ಡೆಂಘಿ ಪ್ರಕರಣ ಹಾಗೂ ಹೆಚ್ಒನ್ಎನ್ಒನ್ 138 ಪ್ರಕರಣಗಳು ದಾಖಲಾಗಿವೆ.
ಸಾಂಕ್ರಾಮಿಕ ರೋಗಗಳು ಮುಖ್ಯವಾಗಿ ನೀರಿನಿಂದ ಹರಡುತ್ತವೆ. ಇದರಿಂದ ಕುಡಿವ ನೀರು ಪೂರೈಕೆ ಮಾಡುವ ಟ್ಯಾಂಕ್ಗಳಿಗೆ ಕ್ಲೋರಿನೇಷನ್ ಹಾಕಿ ನೀರು ಪೂರೈಕೆ ಮಾಡಬೇಕು ಹಾಗೂ ಮನೆಯಲ್ಲಿ ಕುಡಿವ ನೀರು ಬಳಸಬೇಕಾದ್ರೆ ಹರಿಜಿನ್ ಟ್ಯಾಬ್ಲೆಟ್ ಹಾಕಿ ಬಳಸಬೇಕು. ಇದರಿಂದ ಸಾಂಕ್ರಮಿಕ ರೋಗ ತಡೆಗಟ್ಟಬಹುದಾಗಿದೆ. ಇನ್ನು ಸಾಂಕ್ರಾಮಿಕ ರೋಗ ತಡೆಗಟ್ಟಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದೆ.
ಇದರಲ್ಲಿ ವೈದ್ಯಾಧಿಕಾರಿಗಳು ಸೇರಿದಂತೆ ನರ್ಸ್ ಹಾಗೂ ಆಶಾ ಕಾರ್ಯಕರ್ತೆಯರು ಸಹ ಹಾಜರಿರಲಿದ್ದಾರೆ. ಜಿಲ್ಲೆಯನ್ನು ನಗರ ಹಾಗೂ ಗ್ರಾಮೀಣ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ನಗರ ಪ್ರದೇಶಕ್ಕೆ ಹಾಗೂ ಗ್ರಾಮೀಣ ಪ್ರದೇಶಕ್ಕೆ ಬೇರೆ ಬೇರೆಯಾಗಿ ತಂಡ ಕಳುಹಿಸಿ, ಅಲ್ಲಿ ಸಾಂಕ್ರಮಿಕ ರೋಗದ ಅರಿವು ಹಾಗೂ ತಡೆಗಟ್ಟುವ ವಿಧಾನವನ್ನು ತಿಳಿಸಿ ಕೊಡಲಾಗುತ್ತದೆ ಎಂದು ಡಿಹೆಚ್ಒ ಡಾ.ರಾಜೇಶ್ ಸುರಗಿಹಳ್ಳಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕಂಡು ಬಂದ ರೋಗಗಳ ಪ್ರಕರಣಗಳು ಇಂತಿವೆ:
ವಿಷಮ ಶೀತ ಜ್ವರ - 820
ಕಾಮಾಲೆ -127
ಕ್ಷಯ-815
ಕುಷ್ಟ- 26
ಇಲಿ ಜ್ವರ-119
ಮಲೇರಿಯಾ-3
ಡೆಂಘಿ-194
ಚಿಕೂನ್ ಗೂನ್ಯ -164
ಹೆಚ್ಒನ್ಎನ್ಒನ್-133 ಪ್ರಕರಣಗಳು ಪತ್ತೆಯಾಗಿದ್ದು, ಇದಕ್ಕೆ 6 ಜನ ಬಲಿಯಾಗಿದ್ದಾರೆ.
ಅಷ್ಟೇ ಅಲ್ಲ 343 ಜನರಲ್ಲಿ
ಮಂಗನ ಕಾಯಿಲೆ ಕಾಣಿಸಿಕೊಂಡಿದೆ. ಈ ಕಾಯಿಲೆಗೆ ಒಟ್ಟು 12 ಜನ ಬಲಿಯಾಗಿದ್ದಾರೆ.
ಜಿಲ್ಲೆಯಲ್ಲಿ ಮಂಗನ ಕಾಯಿಲೆ, ಚಿಕೂನ್ ಗೂನ್ಯ, ಡೆಂಘಿ ಕಾಯಿಲೆಗಳ ಪರೀಕ್ಷೆಯು ಜಿಲ್ಲಾ ಪ್ರಯೋಗಾಲಯದಲ್ಲಿ ನಡೆಯಲಿದೆ. ಹೆಚ್ಒನ್ಎನ್ಒನ್ ಪರೀಕ್ಷೆಯು ಮಣಿಪಾಲದಲ್ಲಿ ನಡೆಯುತ್ತದೆ. ಜಿಲ್ಲಾ ಆರೋಗ್ಯ ಇಲಾಖೆಯು ಮಣಿಪಾಲ್ ಆಸ್ಪತ್ರೆ ಜೊತೆ ಸಂಪರ್ಕದಲ್ಲಿದ್ದು, ಮಾಹಿತಿ ಪಡೆದು ಚಿಕಿತ್ಸೆ ನೀಡುತ್ತೇವೆ ಎನ್ನುತ್ತಾರೆ ಜಿಲ್ಲಾ ಸಾಂಕ್ರಾಮಿಕ ರೋಗಗಳ ಸರ್ವೆಕ್ಷಣಾಧಿಕಾರಿ ಡಾ. ಶಂಕರಪ್ಪನವರು.